ಶಿಫ್ಟ್‌ಗಳಲ್ಲಿ ಕೆಲಸ ಮಾಡುವವರ ಶರೀರದಲ್ಲಿ ಏನಾಗುತ್ತದೆ..?
ಶಿಫ್ಟ್‌ಗಳಲ್ಲಿ ಕೆಲಸ ಮಾಡಬೇಕಾಗದ ಅವಶ್ಯಕತೆ ಇಂದಿನ ದಿನಗಳಲ್ಲಿ ಸಾಧಾರಣವಾಗಿಬಿಟ್ಟಿದೆ. ಕೇವಲ ರಾತ್ರಿ ಸಮಯದಲ್ಲಷ್ಟೇ ಅಲ್ಲ. ೯-೫ರ ಸಮಯದಲ್ಲಿ ಮಾಡುವ ಕೆಲಸಕ್ಕೆ ಭಿನ್ನವಾಗಿ ಹಲವು ರೀತಿಯ ಶಿಫ್ಟ್‌ಗಳಿರುತ್ತವೆ. ಮುಂಜಾನೆಯೇ ಕ್ಲೀನಿಂಗ್ ಕೆಲಸಗಳು, ಅಂಗಡಿಗಳು, ಟ್ಯಾಕ್ಸಿ ಓಡಿಸುವುದು, ಆರೋಗ್ಯಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವಿವಿಧ ಸಮಯದಲ್ಲಿ, ವಿವಿಧ ಸಮಯದಲ್ಲಿ, ವಿವಿಧ ಶಿಫ್ಟ್‌ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗೆ ಶಿಫ್ಟ್‌ಗಳಲ್ಲಿ ಕೆಲಸ ಮಾಡುವುದಕ್ಕೆ ಅನೇಕ ಮಂದಿಗೆ ಅನೇಕ ಕಾರಣಗಳಿರುತ್ತವೆ. ಉದ್ಯೋಗ ಸಿಗುತ್ತದೆ ಎಂಬ ಕಾರಣಕ್ಕೆ ಅನಿವಾರ್ಯವಾಗಿ ಕೆಲವರು ಶಿಫ್ಟ್‌ನಲ್ಲಿ ಕೆಲಸ ಮಾಡಲು ಒಪ್ಪುತ್ತಾರೆ. ಇನ್ನು ಕೆಲವರು ಮಕ್ಕಳು ಜವಾಬ್ದಾರಿ, ಮನೆಯ ಕೆಲಸ ಮುಗಿಸಿದ ನಂತರ ಕೆಲಸಕ್ಕೆ ಹೋಗುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಶಿಫ್ಟ್‌ನಲ್ಲಿ ಕೆಲಸ ಮಾಡುವುದರಿಂದ ಎದುರಾಗುವ ತೊಂದರೆಗಳೇನು..?
ಶಿಫ್ಟ್‌ಗಳಲ್ಲಿ ಕೆಲಸ ಮಾಡುವವರಲ್ಲಿ ತೂಕ ಹೆಚ್ಚಾಗುವುದು, ರಕ್ತದೊತ್ತಡ, ಷುಗರ್, ಹೃದ್ರೋಗದಂತಹ ಅನೇಕ ಆರೋಗ್ಯ ಸಮಸ್ಯೆಗಳು ಬರುತ್ತವೆ ಎಂಬುದು ಸಂಶೋಧನೆಗಳಿಂದ ಬಯಲಾಗಿದೆ. ಅಂದಹಾಗೆ, ನಾವು ರಾತ್ರಿ ವೇಳೆಯಲ್ಲೇ ನಿದ್ರೆ ಮಾಡುತ್ತೇನೆ. ಅದು ನೈಸರ್ಗಿಕ ಕ್ರಿಯೆ ಕೂಡಾ ಹೌದು. ಆದರೆ, ಈ ಸಮಯದಲ್ಲಿ ನಾವು ಎಚ್ಚರದಿಂದಿದ್ದು ಕೆಲಸ ಮಾಡುವುದು, ಹಗಲಿನಲ್ಲಿ ನಿದ್ದೆ ಮಾಡುವುದು ಮಾಡಿದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅನೇಕ ಅನಾರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುವ ಅಪಾಯವಿರುತ್ತದೆ. ನಮ್ಮ ಶರೀರದಲ್ಲಿರುವ ಬ್ಯಾಕ್ಟೀರಿಯಾಗಳಿಗೆ ಕೂಡಾ ಒಂದು ಲಯವಿರುತ್ತದೆ. ನಮ್ಮ ಶಿಫ್ಟ್ ಕೆಲಸಗಳ ಕಾರಣದಿಂದಾಗಿ ಬ್ಯಾಕ್ಟೀರಿಯಾಗಳ ಬದುಕಿನ ವಿಧಾನದಲ್ಲೂ ಬದಲಾವಣೆಯಾಗುತ್ತದೆ. ಇದರಿಂದಾಗಿ ಆರೋಗ್ಯದ ಸಮಸ್ಯೆಗಳು ಶುರುವಾಗುತ್ತವೆ.
ಈ ಸಮಸ್ಯೆಗೆ ಪರಿಹಾರ ಏನು..?
ಇಂದಿನ ಆಧುನಿಕ ಯುಗದಲ್ಲಿ ನಮಗಷ್ಟವಾದ ಶಿಫ್ಟ್‌ಗಳನ್ನು ಆಯ್ಕೆ ಮಾಡಿಕೊಂಡು ಕೆಲಸ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕಂಪನಿ ಹೇಳಿದ ಶಿಫ್ಟ್‌ಗಳಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಈ ಶಿಫ್ಟ್‌ಗಳ ಕಾರಣದಿಂದಾಗಿ ನಮ್ಮ ಆರೋಗ್ಯ ಹದಗೆಡದಂತೆ ನೋಡಿಕೊಳ್ಳಲು ನಾವು ಮಾಡಬೇಕಾದ ಕೆಲ ಕೆಲಸಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸುತ್ತಿದ್ದೇವೆ. ಇದರಲ್ಲಿ ನಿಮಗೆ ಹೊಂದುವ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಪ್ರಮುಖ ಗುರಿ ಏನೆಂದರೆ ನಮ್ಮ ಜೈವಿಕ ಗಡಿಯಾರವನ್ನು ಜಾಗ್ರತೆಯಾಗಿ ಮ್ಯಾನೇಜ್ ಮಾಡುವುದೇ ಆಗಿದೆ.
೧. ಆಹಾರ
ನೈಟ್ ಶಿಫ್ಟ್ ಮಾಡುವವರು ಮಾಮೂಲಿ ಸಮಯದಲ್ಲಿ ತಿನ್ನುವ ಆಹಾರವನ್ನು, ಅದೇ ಸಮಯಕ್ಕೆ ತಿನ್ನುವುದರಿಂದ ಪ್ರಯೋಜನವಿರುತ್ತದೆ ಎಂದು ಹೇಳುತ್ತಾರೆ. ಹಗಲು ಸಾಮಾನ್ಯ ದಿನಗಳ ರೀತಿಯಲ್ಲೇ ತಿನ್ನುವುದು, ರಾತ್ರಿ ವೇಳೆಯಲ್ಲಿ ಆಹಾರವನ್ನು ಕಡಿಮೆ ತಿನ್ನುವುದು ಒಳ್ಳೆಯದು. ರಾತ್ರಿ ವೇಳೆ ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಇದಕ್ಕೆ ಕಾರಣವೂ ಇದೆ. ರಕ್ತದಲ್ಲಿ ಗ್ಲುಕೋಸ್, ಫ್ಯಾಟ್ ಲೆವೆಲ್ಸ್ ಸಾಯಂಕಾಲ ಹಾಗೂ ರಾತ್ರಿ ಸಮಯದಲ್ಲಿ ಹೆಚ್ಚಾಗಿರುತ್ತದೆ. ಆ ಸಮಯದಲ್ಲಿ ಮತ್ತೆ ನಾವು ಕೊಬ್ಬಿನಂಶ ಇರುವ ಪದಾರ್ಥಗಳನ್ನು ಸೇವಿಸುವುದರಿಂದ ರಕ್ತದಲ್ಲಿ ಅವುಗಳ ಲೆವೆಲ್ಸ್ ಹೆಚ್ಚಾಗುತ್ತಾ ಹೋಗುತ್ತವೆ.
ಆದ್ದರಿಂದ ರಾತ್ರಿ ಸಮಯದಲ್ಲಿ ಹೆಚ್ಚಿನ ಫ್ಯಾಟ್ ಇರುವ ಆಹಾರವನ್ನು ಸೇವಿಸದೇ ಇರುವುದು ಒಳ್ಳೆಯದು. ಅದಕ್ಕೆ ಬದಲಾಗಿ, ತರಕಾರಿಗಳು, ಪ್ರೊಟೀನ್ ಇರುವ ಧಾನ್ಯಗಳು, ಹಣ್ಣುಗಳನ್ನು ಸೇವಿಸಬೇಕು. ಅದಕ್ಕಿಂತ ಹೆಚ್ಚಾಗಿ ಬೆಳಗ್ಗೆ ಹಾಗೂ ಸಾಯಂಕಾಲದ ಸಮಯದಲ್ಲಿ ಲಘು ಆಹಾರ ಅಥವಾ ಸಲಾಡ್‌ಗಳನ್ನು ಸೇವಿಸುವುದು ಉತ್ತಮ.
೨. ವ್ಯಾಯಾಮ
ವ್ಯಾಯಾಮದಿಂದ ದೇಹದಲ್ಲಿ ಚುರುಕುತನ ಹೆಚ್ಚಾಗುತ್ತದೆ. ಜಾಗಿಂಗ್ ಮಾಡಬೇಕು ಎಂದುಕೊಂಡರೆ ಶಿಫ್ಟ್‌ಗೆ ಹೋಗುವ ಮುಂಚೆ ಮಾಡಿ. ಆದರೆ, ಶಿಫ್ಟ್ ಮುಗಿಸಿಕೊಂಡು ಮನೆಗೆ ಬಂದು ನಿದ್ದೆ ಮಾಡುವ ಮೊದಲು ಯಾವುದೇ ಕಾರಣಕ್ಕೂ ಮಾಡಬೇಡಿ.
೩. ನಿದ್ರೆ
ರಾತ್ರಿ ವೇಳೆ ಕೆಲಸ ಮಾಡುವವರಿಗೆ ನಿದ್ರೆ ತುಂಬಾನೇ ಮುಖ್ಯವಾಗುತ್ತದೆ. ಅಂದರೆ, ಹಗಲು ಹೊತ್ತು ನಿದ್ದೆ ಮಾಡುವುದಕ್ಕೆ ಸರಿಯಾದ ವಾತಾವರಣ ಸೃಷ್ಟಿಸಿಕೊಳ್ಳಬೇಕಾದ ಅವಶ್ಯಕತೆ ಇರುತ್ತದೆ. ಹಗಲು ಹೊತ್ತಿನಲ್ಲಿ ನೀವು ನಿದ್ದೆ ಮಾಡುವ ಜಾಗ ಕತ್ತಲಿನಿಂದ ಕೂಡಿರಬೇಕೆಂದು ನಿಪುಣರು ಹೇಳುತ್ತಾರೆ. ಇದಕ್ಕೆ ಬ್ಲ್ಯಾಕ್‌ಔಟ್ ಬ್ಲೈಂಡ್‌ಗಳು, ದಪ್ಪನೆಯ ಕರ್ಟನ್‌ಗಳು ತುಂಬಾನೇ ಸಹಾಯಕವಾಗುತ್ತವೆ. ಇಲ್ಲದಿದ್ದರೆ ಐ ಮಾಸ್ಕ್ ಕೂಡಾ ಬಳಸಬಹುದು. ಬೆಳಗಿನ ಸೂರ್ಯನ ಕಿರಣಗಳಲ್ಲಿ ನೀಲಿ ಬಣ್ಣ, ಸಾಯಂಕಾಲದ ಸೂರ್ಯನ ಕಿರಣಗಳಲ್ಲಿ ಕೆಂಪು ಬಣ್ಣ ಇರುತ್ತದೆ. ನೀಲಿ ಬಣ್ಣ ಎಚ್ಚರದಿಂದಿರುವುದಕ್ಕೆ, ಕಿತ್ತಲೆ ಬಣ್ಣದ ಬೆಳಕು ನಿದ್ದೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಬೆಳಗಿನ ಜಾವ ಶಿಫ್ಟ್ ಮುಗಿಸಿಕೊಂಡು ಬರುವಾಗ ಸೂರ್ಯನ ಕಿರಣಗಳು ಸೋಕದಂತೆ ನೋಡಿಕೊಳ್ಳಬೇಕು. ನೀಲಿ ಬಣ್ಣ ನಿರೋಧಕ ಸ್ಪೆಷಲ್ ಸನ್‌ಗ್ಲಾಸ್‌ಗಳನ್ನು ಬಳಸುವುದು ಉತ್ತಮ.
೪.ಕೆಫಿನ್
ಕೆಫಿನ್ ಪ್ರಭಾವ ಕಡಿಮೆಯಾಗುವುದಕ್ಕೆ ಹಲವು ಗಂಟೆಗಳು ಬೇಕು. ಆದರೆ, ಈ ಸಮಯ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಶಿಫ್ಟ್‌ನಲ್ಲಿ ಕೆಲಸ ಮಾಡುವವವರು ಶಿಫ್ಟ್ ಮುಗಿಯೋ ವೇಳೆಯಲ್ಲಿ ಕೆಫಿನ್ ಇರುವ ಪಾನೀಯಗಳನ್ನು ಸೇವಿಸದಿರುವುದು ಉತ್ತಮ.
೫. ವರ್ಕಿಂಗ್ ಅವರ್ಸ್
ಅವಕಾಶವಿದ್ದಷ್ಟೂ ಒಂದೇ ಶಿಫ್ಟ್‌ನಲ್ಲಿ ಕೆಲಸ ಮಾಡುವುದಕ್ಕೆ ಪ್ರಯತ್ನ ಮಾಡಿ. ಒಂದೇ ಶಿಫ್ಟ್‌ನಲ್ಲಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು ತುಂಬಾನೇ ಕಡಿಮೆಯಾಗುತ್ತವೆ.