BengaluruHistory

ಬೆಂಗಳೂರು ಇತಿಹಾಸ; ಮಲ್ಲೇಶ್ವರ ಹಾಗೂ ಬಸವನಗುಡಿ ಬಡಾವಣೆಗಳು ಹುಟ್ಟಿದ್ದು ಹೇಗೆ ಗೊತ್ತಾ..?

ಅದು ೧೮೯೮ರ ಸಮಯ.. ಬೆಂಗಳೂರಿನಲ್ಲಿ ಆಗ ಕೇವಲ ೯೦ ಸಾವಿರ ಜನಸಂಖ್ಯೆ ಇತ್ತು.. ಆಗಲೂ ವಿವಿಧ ಭಾಗಗಳಿಂದ ವಲಸೆ ಬಂದವರೇಯ್ ಹೆಚ್ಚಿದ್ದರು.. ಆದರೆ, ಕೊರೋನಾದಂತೆ ಆಗ ಪ್ಲೇಗ್‌ ಎಂಬ ಮಹಾಮಾರಿ ಇಡೀ ಪ್ರಪಂಚವನ್ನು ಹೈರಾಣಾಗಿಸಿತ್ತು. ಪ್ಲೇಗ್‌ ಕೂಡಾ ಚೀನಾದ ಕೊಡುಗೆಯೇ. ಚೀನಾದಿಂದ ಬೆಂಗಳೂರಿಗೂ ವಕ್ಕರಿಸಿದ್ದ ಪ್ಲೇಗ್‌ ಸೋಂಕು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿತ್ತು.. ಇದಕ್ಕೆ ಹೆದರಿ ಸಾವಿರಾರು ಜನರ ತಮ್ಮ ಊರುಗಳಿಗೆ ವಾಪಸ್‌ ಹೋಗಿದ್ದರು. ಪ್ಲೇಗ್‌ ಮಹಾಮಾರಿ ಬೆಂಗಳೂರಿನಿಂದ ಕಾಣೆಯಾಗುವ ವೇಳೆ ಬೆಂಗಳೂರಿನ ಜನಸಂಖ್ಯೆ ೯೦ ರಿಂದ ೫೦ ಸಾವಿರಕ್ಕೆ ಇಳಿದಿತ್ತು.
ಅಂದಹಾಗೆ, ಆಗಲೂ ಕೂಡಾ ಜನರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಹೋಂ ಕ್ವಾರಂಟೈನ್‌ನಲ್ಲೂ ಇಡಲಾಗಿತ್ತು. ಇದಾದ ನಂತರ ಇಕ್ಕಟ್ಟಿನಲ್ಲಿ ಜೀವಿಸುವುದರ ಬದಲು, ಹೊಸ ಬಡಾವಣೆಗಳನ್ನು ನಿರ್ಮಿಸಿ ಜನರನ್ನು ದೂರ ದೂರ ಇರಿಸುವ ತೀರ್ಮಾನಕ್ಕೆ ಬರಲಾಯಿತು. ಅದರಂತೆ ಜನರು ದೂರ ದೂರ ಜೀವಿಸಲು, ಸೋಷಿಯಲ್‌ ಡಿಸ್ಟೆನ್ಸ್‌ ಪಾಲನೆ ಮಾಡುವುದಕ್ಕಾಗಿ ಎರಡು ಬಡಾವಣೆಗಳನ್ನು ನಿರ್ಮಿಸಲಾಯಿತು. ಆ ಎರಡು ಬಡಾವಣೆಗಳೇ ಬಸವನಗುಡಿ ಹಾಗೂ ಮಲ್ಲೇಶ್ವರ. ಕಾಡು ಮಲ್ಲೇಶ್ವರ ದೇವಸ್ಥಾನವಿದ್ದ ಕಾರಣಕ್ಕಾಗಿ ಒಂದು ಬಡಾವಣೆಗೆ ಮಲ್ಲೇಶ್ವರವೆಂದೂ, ದೊಡ್ಡ ಬಸವಣ್ಣನ ದೇಗುಲವಿದ್ದ ಕಾರಣಕ್ಕಾಗಿ ಮತ್ತೊಂದು ಬಡಾವಣೆಗೆ ಬಸವನಗುಡಿ ಎಂದೂ ಹೆಸರಿಡಲಾಯಿತು. ಈ ಎರಡೂ ಬಡಾವಣೆಗಳು ಈಗ ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಗಳಾಗಿವೆ. ಬೆಂಗಳೂರಿನ ಪರಂಪರೆ ಹಾಗೂ ಸಾಂಸ್ಕೃತಿಕ ಹಿನ್ನೆಲೆಗೆ ಸಾಕ್ಷಿಯಾಗಿ ನಿಂತಿವೆ.
೨೦೧೯ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಅದರಂತೆ ಪ್ಲೇಗ್‌ ಕೂಡಾ ಚೀನಾದಲ್ಲೇ ಮೊದಲು ಕಾಣಿಸಿಕೊಂಡಿದ್ದು. ೧೮೬೦ರಲ್ಲಿ ಚೀನಾದಲ್ಲಿ ಪ್ಲೇಗ್‌ ಸೋಂಕಿನ ಮೊದಲ ಕೇಸ್‌ ಪತ್ತೆಯಾಯಿತು. ನಂತರ ಅದು ನಾನಾ ಪ್ರದೇಶಗಳಿಗೆ ವ್ಯಾಪಿಸಿ, ೧೮೯೪ರಲ್ಲಿ ಹಾಂಕಾಂಗ್‌ಗೆ ಹಬ್ಬಿತ್ತು. ಅಲ್ಲಿಂದ ೧೮೯೬ ಆಗಸ್ಟ್‌ನಲ್ಲಿ ವ್ಯಕ್ತಿಯೊಬ್ಬರು ಹಡಗಿನ ಮೂಲಕ ಮುಂಬೈಗೆ ಆಗಮಿಸಿದ್ದರು. ಆ ವ್ಯಕ್ತಿಯಿಂದ ಪ್ಲೇಗ್‌ ಮುಂಬೈಗೆ ಹರಡಿತು. ಅದಾದ ಮುಂದಿನ ವರ್ಷ ಪ್ಲೇಗ್‌ ಮಹಾಮಾರಿ ಕರ್ನಾಟಕಕ್ಕೆ ಪ್ರವೇಶ ಮಾಡುತ್ತದೆ. ೧೮೯೭ರ ಡಿಸೆಂಬರ್‌ನಲ್ಲಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ ಪ್ಲೇಗ್‌ ಕಾಣಿಸಿಕೊಳ್ಳುತ್ತದೆ. ಅಲ್ಲಿಂದ ಹಲವು ಹಳ್ಳಿಗಳಿಗೆ ಪ್ಲೇಗ್‌ ಹರಡುತ್ತದೆ. ಕೊನೆಗೆ ಅದು ೧೮೯೮ರಲ್ಲಿ ಬೆಂಗಳೂರಿಗೂ ವಕ್ಕರಿಸುತ್ತದೆ. ರಾಜ್ಯಾದ್ಯಂತ ಸಾವಿರಾರು ಜನರನ್ನು ಬಲಿ ಪಡೆಯುತ್ತದೆ.
ಪ್ಲೇಗ್‌ ನಂತರ ಗುಣಮುಖರಾದ ಜನರಿಗೆ ಒಂದು ನೆಲೆ ಕಲ್ಪಿಸುವ ಉದ್ದೇಶದಿಂದ ಮೈಸೂರು ಸಂಸ್ಥಾನವು ನಗರ ಅಭಿವೃದ್ಧಿ ಮಂಡಳಿಯಿಂದ ಶುದ್ಧ ಗಾಳಿ, ಗಿಡ, ಮರಗಳಿರುವ ಜಾಗವನ್ನು ಗುರುತಿಸಿ ನಿವೇಶನಗಳನ್ನು ನಿರ್ಮಿಸಿತು. ಆ ನಿವೇಶನಗಳನ್ನು ಪಡೆದ ಜನರು ಅಲ್ಲಿ ಮನೆಗಳನ್ನು ನಿರ್ಮಿಸಿಕೊಂಡರು. ಆ ಸ್ಥಳಗಳಿಗೆ ಬಸವನಗುಡಿ, ಮಲ್ಲೇಶ್ವರ ಎಂದು ಹೆಸರಾಯಿತು.

Share Post