ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ದೆಹಲಿ ಬಿಜೆಪಿ ನಿಯೋಗ ಆಸ್ಪತ್ರೆಗೆ ಭೇಟಿ
ಬೆಳಗಾವಿ; ಬೆಳಗಾವಿ ಬಳಿ ವಂಟಮೂರಿ ಗ್ರಾಮದಲ್ಲಿ ಯುವಕನೊಬ್ಬ ಅದೇ ಗ್ರಾಮದ ಯುವತಿಯೊಂದಿಗೆ ಪರಾರಿಯಾಗಿದ್ದ. ಇದರಿಂದ ರೊಚ್ಚಿಗೆದ್ದ ಯುವತಿ ಮನೆಯವರು ಯುವಕನ ಮನೆ ಧ್ವಂಸ ಮಾಡಿದ್ದಲ್ಲದೆ, ಆತನ ತಾಯಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ್ದರು. ನಂತರ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದರು. ಇದೀಗ ಮಹಿಳೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಪ್ರಕರಣವನ್ನು ಸರ್ಕಾರ ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹೊರಟಿದೆ. ಪ್ರತಿಭಟನೆಗೂ ಕರೆ ನೀಡಲಾಗಿದೆ.
ಈ ನಡುವೆ ಬಿಜೆಪಿ ಹೈಕಮಾಂಡ್ ಕೂಡಾ ಈ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದೆ. ಈ ಬೆನ್ನಲ್ಲೇ ದೆಹಲಿಯಿಂದ ಬಿಜೆಪಿ ನಿಯೋಗವೊಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದೆ. ಜೊತೆಗೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದೆ.
ಬಿಜೆಪಿ ಸತ್ಯ ಶೋಧನಾ ತಂಡದಲ್ಲಿ ಸಂಸದರಾದ ಅಪರಾಜಿತ್ ಸಾರಂಗಿ, ಸುನೀತಾ ದುಗ್ಗಲ್, ರಂಜಿತಾ ಕೋಳಿ, ಲಾಕೆಟ್ ಚಟರ್ಜಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಕ್ರಾ ಇದ್ದರು. ಈ ತಂಡ ಮಹಿಳೆಯ ಸ್ವಗ್ರಾಮವಾದ ವಂಟಮೂರಿಗೂ ಭೇಟಿ ನೀಡಿದೆ.
ಇನ್ನು ಘಟನೆ ಖಂಡಿಸಿ ರಾಜ್ಯ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.