Tirupati; ತಿರುಪತಿಯಲ್ಲಿ ಸಿಂಹಕ್ಕೆ ಆಹುತಿಯಾದ ವ್ಯಕ್ತಿ!
ತಿರುಪತಿ; ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ಉತ್ತರ ಭಾರತದ ವ್ಯಕ್ತಿಯೊಬ್ಬ ಸಿಂಹಕ್ಕೆ ಆಹುತಿಯಾಗಿದ್ದಾನೆ. ಎಲ್ಲರೂ ನೋಡನೋಡುತ್ತಿದ್ದಂತೆ ಸಿಂಹ ಆತನನ್ನು ಕೊಂದಿದೆ. ತಿರುಪತಿಯಲ್ಲಿರುವ ಝೂ ಪಾರ್ಕ್‌ನಲ್ಲಿ ಈ ದುರ್ಘಟನೆ ನಡೆದಿದೆ.
ರಾಜಸ್ಥಾನ ಮೂಲಕ ಪ್ರಹ್ಲಾದ್ ಗುರ್ಜರ್ ಎಂಬಾತನೇ ಸಿಂಹಕ್ಕೆ ಜೀವತೆತ್ತ ವ್ಯಕ್ತಿಯಾಗಿದ್ದಾನೆ. ಇವರು ತಿರುಮಲ ತಿಮ್ಮಪ್ಪ ದರ್ಶನಕ್ಕೆ ಬಂದಿದ್ದರು. ದರ್ಶನ ಮುಗಿಸಿ ತಿರುಪತಿಯಲ್ಲಿರುವ ಏಷ್ಯಾದ ಅತಿದೊಡ್ಡ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅದೇನಾಯ್ತೋ ಏನೋ ಪ್ರಹ್ಲಾದ್, ಸಿಂಹ ಇರುವ ಪ್ರದೇಶದ ಬೇಲಿ ಹಾರಿ ಒಳಹೋಗಿದ್ದಾರೆ. ಈ ವೇಳೆ ಸಿಂಹ ದಾಳಿ ಮಾಡಿ ಆತನನ್ನು ಕೊಂದುಹಾಕಿದೆ. ಝೂ ಸಿಬ್ಬಂದಿ, ಪ್ರಹ್ಲಾದ್‌ರನ್ನು ಉಳಿಸಲು ಯತ್ನಿಸಿದರಾದರೂ ಅಷ್ಟರಲ್ಲಿ ಸಿಂಹ, ಆತನನ್ನು ಕೊಂದು ಮುಗಿಸಿತ್ತು. ಪ್ರಹ್ಲಾದ್ ಅವರ ಮುಖದ ಕೆಲ ಭಾಗನ ಕಚ್ಚಿ ತಿಂದಿದೆ ಎಂದು ತಿಳಿದುಬಂದಿದೆ.
ತಿರುಪತಿಗೆ ಬರುವ ಭಕ್ತರು ಈ ಝೂ ಪಾರ್ಕ್‌ಗೆ ಭೇಟಿ ನೀಡುತ್ತಾರೆ. ವಿಶಾಲವಾದ ಈ ಝೂ ಪಾರ್ಕ್‌ನಲ್ಲಿ ಅನೇಕ ಕಾಡುಮೃಗಗಳಿವೆ… ಹಾಗೆಯೇ ರಾಜಸ್ಥಾನದಿಂದ ಬಂದಿದ್ದ ಪ್ರಹ್ಲಾದ್ ಕೂಡಾ ಝೂಪಾರ್ಕ್‌ಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಸಿಂಹವಿರುವ ಸ್ಥಳಕ್ಕೆ ನುಗ್ಗಿದ್ದಾರೆ. ಅವರೇ ಅಲ್ಲಿಗೆ ಹಾರಿಹೋಗಿದ್ದರಿಂದ ಸಿಂಹ ಅವರನ್ನು ಸಾಯಿಸಿದೆ. ಪ್ರಹ್ಲಾದ್ ಸಾಯಲೆಂದೇ ಹಾಗೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಇದನ್ನು ವೆಂಕಟೇಶ್ವರ ಮೃಗಾಲಯ ಎಂದು ಕರೆಯುತ್ತಾರೆ. ಇದು ಏಷ್ಯಾದಲ್ಲೇ ಅತಿ ವಿಶಾಲವಾದ ಮೃಗಾಲಯವಾಗಿದೆ. ಸುಮಾರು 1250 ಎಕರೆ ಪ್ರದೇಶದಲ್ಲಿ ಈ ಮೃಗಾಲಯವಿದೆ. ನೂರಾರು ಜಾತಿಯ ಪ್ರಾಣಿಗಳು, ಪಕ್ಷಿಗಳು, ಸರಿಸೃಪಗಳು ಎಲ್ಲಾ ಇವೆ. ತಿರುಮಲ ದರ್ಶನಕ್ಕೆ ಬರುವ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಇವತ್ತೂ ಕೂಡಾ ಸಾವಿರಾರು ಜನರು ಝೂ ಪಾರ್ಕ್ ವೀಕ್ಷಣೆಗೆ ಬಂದಿದ್ದರು. ದೇವರ ದರ್ಶನ ಪಡೆದು ಇಲ್ಲಿಗೆ ಬಂದಿದ್ದ ಜನರು, ಮೃಗಗಳನ್ನು ನೋಡಿ ಆನಂದಿಸುತ್ತಿದ್ದರು. ಇದೇ ವೇಳೆ ಈ ದುರ್ಘಟನೆ ನಡೆದಿದೆ.
ಡಿಎಸ್‌ಪಿ ಶರತ್ ರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸತ್ತಿರುವ ವ್ಯಕ್ತಿಯ ತಪ್ಪಿನಿಂದಲೇ ಹೀಗೆ ಆಗಿದೆಯೇ ಅಥವಾ ಝೂ ಸಿಬ್ಬಂದಿಯ ಅಚಾತುರ್ಯದಿಂದ ಹೀಗೆ ಆಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಇಲ್ಲವೇ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಇಲ್ಲಿಗೆ ಬಂದಿದ್ದರೇ ಎಂಬುದರ ಕುರಿತೂ ತನಿಖೆ ನಡೆಯುತ್ತಿದೆ.