ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆ, ದೇಶದಲ್ಲಿರುವ ಕೊರೊನಾ ಪರಿಸ್ಥಿತಿ ಕುರಿತು ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ವಿಮಾನಯಾನ ರದ್ದು ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಬೇಕೆಂದು ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ. ಹೊಸ ರೂಪಾಂತರಿ ತಳಿಯಿಂದ ಪ್ರಭಾವಿತವಾಗಿರುವ ದೇಶಗಳಿಂದ ಬರುವ, ಹೋಗುವ ವಿಮಾನಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹೊಸ ರೂಪಾಂತರಿ ತಳಿ ಭಾರತಕ್ಕೂ ಕಾಲಿಡಲಿದೆ. ಈಗಾಗಲೇ ಭಾರತ ಸಾಕಷ್ಟು ಸಂಕಷ್ಟ ಅನುಭವಿಸಿದೆ. ಸಾಕಷ್ಟು ಕಷ್ಟದಿಂದ ದೇಶ ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸದಿದ್ದರೆ ಮತ್ತೆ ಸಂಕಷ್ಟ ಅನುಭವಿಸಬೇಕಾಗುತ್ತದೆ. ಹೀಗಾಗಿ ಕೇಂದ್ರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕೊರೊನಾದ ಆತಂಕ ಇನ್ನೂ ಸುಳಿದಾಡುತ್ತಿರುವ ಬೆನ್ನಲ್ಲೇ ಮತ್ತೊಂದು ಕೊರೊನಾ ರೂಪಾಂತರಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ವಿಶ್ವಸಂಸ್ಥೆ ಅದಕ್ಕೆ ಒಮಿಕ್ರೋನ್ ಎಂದು ಹೆಸರಿಟ್ಟಿದೆ. ಇದು ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಲಿದೆ. ಇವು ಮರುಸೋಂಕಿನ ಅಪಾಯವನ್ನು ಸೂಚಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ. ನಂತರ ಬೋಟ್ಸ್ವಾನಾ, ಬೆಲ್ಜಿಯಂ, ಹಾಂಕಾಂಗ್ ಮತ್ತು ಇಸ್ರೇಲ್‌ನಲ್ಲಿಯೂ ಈ ಅಪಾಯಕಾರಿ ವೈರಸ್ ಇರುವುದನ್ನು ಗುರುತಿಸಲಾಗಿದೆ.
ಒಮಿಕ್ರೋನ್ ಆತಂಕ ಹಿನ್ನೆಲೆ ಹಲವಾರು ದೇಶಗಳು ದಕ್ಷಿಣ ಆಫ್ರಿಕಾಕ್ಕೆ ಮತ್ತು ಅಲ್ಲಿಂದ ಬೇರೆಡೆಗೆ ಪ್ರಯಾಣವನ್ನು ನಿಷೇಧಿಸಲು ನಿರ್ಧರಿಸಿವೆ. ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ, ಬೋಟ್ಸ್ವಾನಾ, ಲೆಸೊಥೊ ಮತ್ತು ಇಸ್ವಾಟಿನಿಯಿಂದ ಬರುವ ಪ್ರಯಾಣಿಕರು ಯುಕೆ ಅಥವಾ ಐರಿಶ್ ಪ್ರಜೆಗಳು ಅಥವಾ ಯುಕೆ ನಿವಾಸಿಗಳ ಹೊರತು ಬೇರೆ ಯಾರೂ ಯುಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.