ಆಜಾದಿ ಕಾ ಅಮೃತ್ ಮಹೋತ್ಸವ್ ಹಿನ್ನೆಲೆ; 75 ದಿನ ಎಲ್ಲರಿಗೂ ಬೂಸ್ಟರ್ ಡೋಸ್ ಉಚಿತ
ನವದೆಹಲಿ; 2022 ರ ಜುಲೈ 15 ರಿಂದ ಮುಂದಿನ 75 ದಿನಗಳವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಡ್-19 ಬೂಸ್ಟರ್ ಡೋಸ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಈ ಘೋಷಣೆ ಮಾಡಲಾಗಿದೆ.
ಭಾರತ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ಆಜಾದಿ ಕಾ ಅಮೃತ್ ಕಾಲ್ ಸಂದರ್ಭದಲ್ಲಿ, 15 ಜುಲೈ, 2022 ರಿಂದ ಮುಂದಿನ 75 ದಿನಗಳವರೆಗೆ, 18 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡುವುದಕ್ಕೆ ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಜನರಿಗೆ ಉಚಿತ ಬೂಸ್ಟರ್ ಡೋಸ್ ನೀಡುವ ನಿರ್ಧಾರ ಅವರನ್ನು COVID-19 ನಿಂದ ಸುರಕ್ಷಿತವಾಗಿಸುವುದೇ ಆಗಿದೆ ಎಂದು ಠಾಕೂರ್ ಹೇಳಿದ್ದಾರೆ. “ಮುಂಚೂಣಿ ಕಾರ್ಯಕರ್ತರು, ಕೋವಿಡ್ ಯೋಧರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಉಚಿತವಾಗಿದೆ. ಇದನ್ನು ಈಗ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವಿಸ್ತರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.