ಅಮೆರಿಕದಲ್ಲಿ ಬಾಂಬ್ ಸೈಕ್ಲೋನ್; 15 ಮನೆಗಳಿಗೆ ಕರೆಂಟ್ ಕಟ್
ವಾಷಿಂಗ್ಟನ್; ಅಮೆರಿಕಕ್ಕೆ ಬಾಂಬ್ ಸೈಕ್ಲೋನ್ ಬಡಿದಿದ್ದು, ಅಲ್ಲಿನ ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕ್ರಿಸ್‌ಮಸ್ ಸಂಭ್ರಮದಲ್ಲಿದ್ದವರ ಮನೆಗಳಲ್ಲಿ ಕತ್ತಲು ಆವರಿಸಿದೆ. ಮಾರಣಾಂತಿಕ ಶೀತಗಾಳಿಯಿಂದಾಗಿ 15 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಎಲ್ಲೆಲ್ಲೂ ಕತ್ತಲು ಆವರಿಸಿದೆ.
ಶೀತಗಾಳಿಯಿಂದಾಗಿ ಸಾವಿರಾರು ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಅಮೆರಿಕ ಒಟ್ಟು ಜನಸಂಖ್ಯೆಯ ಶೇಕಡಾ 70ರಷ್ಟು ಮಂದಿ ಶೀತಗಾಳಿಗೆ ತುತ್ತಾಗಿ ಸಂತ್ರಸ್ತರಾಗಿದ್ದಾರೆ. 24 ಕೋಟಿ ಜನರು ಈ ಶೀತಗಾಳಿಗೆ ಸಿಲುಕಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ಉಷ್ಣಾಂಶ ಪ್ರಮಾಣವು –48 ಡಿಗ್ರಿ ಸೆಲ್ಷಿಯಸ್ನಷ್ಟು ಕುಸಿದಿದೆ. ಭಾರೀ ಹಿಮಪಾತ, ಬಿರುಗಾಳಿ ಅತಿ ವೇಗವಾಗಿ ಬೀಸುತ್ತಿದೆ.
ಈ ಶೀತ ಬಿರುಗಾಳಿಯನ್ನು ಬಾಂಬ್ ಸೈಕ್ಲೋನ್ ಅಂತ ಕರೀತಾರೆ. ನ್ಯೂಯಾರ್ಕ್ ಸೇರಿ ಹಲವು ಪ್ರಾಂತ್ಯಗಳಲ್ಲಿ ಅತಿವೇಗವಾಗಿ ಗಾಳಿ ಬೀಳಿದ್ದು, ಇದ್ದಕ್ಕಿದ್ದಂತೆ ಉಷ್ಣಾಂಶ ತೀವ್ರವಾಗಿ ಕುಸಿದಿದೆ. ರಸ್ತೆಗಳು ಹಿಮದಿಂದ ಮುಚ್ಚಿಹೋಗಿವೆ. ವಿದ್ಯುತ್ ಕಡಿತವಾಗಿರುವುದರಿಂದ ಹೀಟರ್‌ಗಳೂ ಕೆಲಸ ಮಾಡುತ್ತಿಲ್ಲ. ಇದ್ರಿಂದ ಜನ ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.
ಹಠಾತ್ ಬಿರುಗಾಳಿಯಿಂದಾಗಿ ಅಮೆರಿಕದ ವಿವಿಧೆಡೆ 4,600 ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಲಕ್ಷಾಂತರ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.