ಪ್ರತಿಷ್ಠಿತ ಕಂಪನಿ ಕ್ಯಾಂಟೀನ್ ಸಮೋಸಾದಲ್ಲಿ ಕಾಂಡೋಮ್, ಗುಟ್ಕಾ ಪತ್ತೆ
ಮಹಾರಾಷ್ಟ್ರ: ಪ್ರತಿಷ್ಠಿತ ಕಂಪನಿಯ ಕ್ಯಾಂಟೀನ್ ನಲ್ಲಿ ನೀಡಿದ ಸಮೋಸಾಗಳಲ್ಲಿ ಕಾಂಡೋಮ್ ಗಳು, ಕಲ್ಲು, ಗುಟ್ಕಾಗಳು ಪತ್ತೆಯಾಗಿವೆ. ಪುಣೆಯ ಪಿಂಪ್ರಿ-ಚಿಂಚ್ವಾಡ್ನ ಪ್ರದೇಶದಲ್ಲಿರುವ ಕಂಪನಿಯ ಕ್ಯಾಂಟೀನ್ ನಲ್ಲಿ ಈ ಘಟನೆ ನಡೆದಿದೆ.
ಪುಣೆಯ ಸ್ಥಳೀಯ ದಿನಪತ್ರಿಕೆಯೊಂದು ಈ ಬಗ್ಗೆ ವರದಿ ಮಾಡಿದೆ. ಮಾರ್ಚ್ 27 ರಂದು ಈ ಬಗ್ಗೆ ಪುಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ. ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯಕ್ಕೆ ಒಬ್ಬನನ್ನು ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದಾರೆ.
ಮಾರ್ಚ್ 27 ಕ್ಯಾಂಟೀನ್ ನಲ್ಲಿ ಸಮೋಸಾ ಮಾಡಲಾಗಿದ್ದು, ಅವುಗಳಲ್ಲಿ ಕಾಂಡೋಮ್, ಕಲ್ಲು, ಗುಟ್ಕಾ ಪಾಕೆಟ್, ತಂಬಾಕು ಸೇರಿ ಹಲವು ವಸ್ತುಗಳು ಸಿಕ್ಕಿವೆ. ಬೇಕೆಂದೇ ಸಮೋಸಾಗಳಲ್ಲಿ ಇವನ್ನಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕಂಪನಿಯೊಂದಿಗಿನ ಒಪ್ಪಂದವನ್ನು ಕೊನೆಗೊಳಿಸಲಾಗಿತ್ತು. ಅನಂತರ ಹೊಸ ಗುತ್ತಿಗೆದಾರರಿಂದ ಕ್ಯಾಟರಿಂಗ್ ಒಪ್ಪಂದವನ್ನು ಪಡೆಯುವ ಪ್ರಯತ್ನದಲ್ಲಿ ಉದ್ಯಮಿಯೊಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಜನವರಿಯಲ್ಲಿ ಉತ್ತರ ಪ್ರದೇಶದ ಡಂಕೌರ್ನ ದ್ರೋಣಾಚಾರ್ಯ ಪದವಿ ಕಾಲೇಜಿನ ಸುಮಾರು 20 ಶಿಕ್ಷಕರು ಹೊಸ ವರ್ಷದ ಆಚರಣೆ ಮಾಡಿದ್ದರು. ಈ ವೇಳೆ ಸ್ಥಳೀಯ ಸಿಹಿತಿಂಡಿ ಅಂಗಡಿಯಿಂದ ಸಮೋಸಾ ತರಿಸಲಾಗಿತ್ತು. ಇದನ್ನು ತಿಂದ ನಂತರ ಎಲ್ಲರಿಗೂ ಅನಾರೋಗ್ಯ ಉಂಟಾಗಿ, ಆಸ್ಪತ್ರೆಗೆ ದಾಖಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.