Economy

ಕೇಂದ್ರ ಬಜೆಟ್‌; ವಿವಿಧ ಪಕ್ಷದ ನಾಯಕರು ಏನು ಹೇಳುತ್ತಾರೆ..?

ನವದೆಹಲಿ: ಕೇಂದ್ರ ಸರ್ಕಾರದ 2022-23ನೇ ಸಾಲಿನ ಬಜೆಟ್‌ ಮಂಡಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ನಾಲ್ಕನೇ ಬಾರಿ ಬಜೆಟ್‌ ಮಂಡಿಸಿದ್ದಾರೆ. ಈ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ವಿವಿಧ ಪಕ್ಷಗಳ ಗಣ್ಯರು ಬಜೆಟ್‌ ಬಗ್ಗೆ ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆ. ಯಾರು ಏನು ಹೇಳಿದ್ದಾರೆ ನೋಡೋಣ ಬನ್ನಿ.

ಮೋದಿ ಸರ್ಕಾರದಲ್ಲಿ ಬಜೆಟ್‌ನಲ್ಲಿ ಏನೂ ಇಲ್ಲ.
ಈ ವರ್ಗಗಳಿಗೆ ಏನೂ ಕೊಟ್ಟೇ ಇಲ್ಲ: ೧. ಸಂಬಳ ಪಡೆಯುವ ಜನರು ೨. ಮಧ್ಯಮ ವರ್ಗದವರು ೩. ಬಡವರು ಹಾಗೂ ನಿರ್ಗತಿಕರು ೪. ಯುವಕರು ೫.ಕೃಷಿಕರು ೬. ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಬಡವರು ಹಾಗೂ ದುರ್ಬಲ ವರ್ಗದವರಿಗೆ ನಿರಾಸೆ ತರಿಸಿದೆ
ತಿಂಗಳ ಸಂಬಳ ಪಡೆಯುವವರಿಗೆ ಈ ಬಜೆಟ್‌ನಿಂದ ಯಾವುದೇ ಅನುಕೂಲವಾಗಲ್ಲ. ಮಧ್ಯಮ ವರ್ಗಕ್ಕೂ ಯಾವುದೇ ಉಪಯೋಗವಿಲ್ಲ. ಮಧ್ಯಮ ವರ್ಗ ಕೊರೊನಾದಂತಹ ಸಂದರ್ಭದಲ್ಲಿ ಪರಿಹಾರ ನಿರೀಕ್ಷಿಸುತ್ತಿತ್ತು. ಆದ್ರೆ ರ ತೆರಿಗೆ ಕ್ರಮಗಳ ಮೂಲಕ ಮೋದಿ ಮತ್ತು ನಿರ್ಮಲಾ ಅವರು ಅವರನ್ನು ನಿರಾಶರನ್ನಾಗಿ ಮಾಡಿದ್ದಾರೆ. ದುಡಿಯುವ ವರ್ಗಕ್ಕೆ ಕೇಂದ್ರ ಸರ್ಕಾರ ದ್ರೋಹ ಬಗೆದಿದೆ.
-ರಣದೀಪ್‌ ಸುರ್ಜೇವಾಲಾ, ಕಾಂಗ್ರೆಸ್‌ ನಾಯಕ

ಕೇಂದ್ರ ಸರ್ಕಾರದ ದ್ವಂದ್ವ ನಿಲುವು
ಒಂದು ಕಡೆ ಹವಾಮಾನ ಬದಲಾವಣೆ ವಿಚಾರದಲ್ಲಿ ಕ್ರಮ ಹಾಗೂ ಪರಿಸರ ರಕ್ಷಣೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇನ್ನೊಂದೆಡೆ ಪರಿಸರ ವಿನಾಶಕ್ಕೆ ಕಾರಣವಾಗುವ ನದಿಗಳ ಜೋಡಣೆಗೂ ಒತ್ತು ಕೊಟ್ಟಿದೆ. ಎಲ್ಲವೂ ಬರೀ ಮಾತಿನಲ್ಲಿ ಅಷ್ಟೇ. ನಮಗೆ ಕ್ರಿಯೆ ಮುಖ್ಯವಾಗುತ್ತದೆ. ಮೋದಿ ಸರ್ಕಾರ ವಿನಾಶಕಾರಿ ಹಾದಿಯಲ್ಲಿದೆ.
– ಜಯರಾಮ್‌ ರಮೇಶ್‌, ಕಾಂಗ್ರೆಸ್‌ ನಾಯಕ

ಇದು ಏನೂ ಇಲ್ಲಗಳ ಬಜೆಟ್‌ ಎಂದ ದೀದಿ

ನಿರುದ್ಯೋಗ ಮತ್ತು ಹಣದುಬ್ಬರದಿಂದ ಜನ ಸಾಮಾನ್ಯ ನಲುಗಿ ಹೋಗುತ್ತಿದ್ದಾರೆ. ಇಂತವಹರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದು ಶೂನ್ಯ. ಏನೂ ಇಲ್ಲಗಳ ನಡುವೆ ಕೇಂದ್ರ ಬಜೆಟ್‌ ಕಳೆದು ಹೋಗಿದೆ. ಪೆಗಾಸಿಸ್‌ ಅನ್ನು ಮರೆಮಾಚುವ ಬಜೆಟ್‌ ಇದು.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಶ್ರೀಮಂತರಿಗೆ ಏಕೆ ಹೆಚ್ಚಿನ ತೆರಿಗೆ ವಿಧಿಸಿಲ್ಲ..?

ದೇಶದ ಶೇಕಡಾ 10ರಷ್ಟು ಶ್ರೀಮಂತರು ಶೇಕಡಾ 75ರಷ್ಟು ಸಂಪತ್ತು ಹೊಂದಿದ್ದಾರೆ. ಶೇಕಡಾ 60ರಷ್ಟು ಮಂದಿ ಶೇಕಡಾ 5ಕ್ಕಿಂತಲೂ ಕಡಿಮೆ ಸಂಪತ್ತು ಹೊಂದಿದ್ದಾರೆ. ನಿರುದ್ಯೋಗ, ಬಡತನ ಮತ್ತು ಹಸಿವು ಹೆಚ್ಚುತ್ತಿದೆ. ಕೊರೊನಾ ಸಮಯದಲ್ಲಿ ಶ್ರೀಮಂತರಿಗೆ ಏಕೆ ಹೆಚ್ಚು ತೆರಿಗೆ ವಿಧಿಸಿಲ್ಲ?
-ಸೀತಾರಾಂ ಯೆಚೂರಿ, ಸಿಪಿಐ ನಾಯಕ

ಭವಿಷ್ಯದ ‘ಆತ್ಮ ನಿರ್ಭರ ಭಾರತ’ ಬಜೆಟ್‌

ಭವಿಷ್ಯದ ‘ಆತ್ಮ ನಿರ್ಭರ ಭಾರತ’ ಬಜೆಟ್‌ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು. ಈ ಬಜೆಟ್‌ ‘ಭಾರತದ ಅಮೃತ್ ಕಾಲ’ಕ್ಕೆ ನೀಲನಕ್ಷೆಯಂತಿದೆ. ಬಹು-ಮಾದರಿಯ ಮೂಲಸೌಕರ್ಯ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಹೀಗಾಗಿ ಭಾರತವು ಉದಯೋನ್ಮುಖ ಜಾಗತಿಕ ಆರ್ಥಿಕತೆಯ ಕೇಂದ್ರವಾಗಿ ನಿಲ್ಲಲಿದೆ.
– ಸ್ಮೃತಿ ಇರಾನಿ, ಕೇಂದ್ರ ಸಚಿವೆ

 

Share Post