Economy

ರೆಪೋ ದರ ಏರಿಸಿದ ಆರ್‌ಬಿಐ; ಸಾಲದ ಮೇಲಿನ ಬಡ್ಡಿ ಏರಿಕೆ

ಮುಂಬೈ: ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಬೇಕಾದ ಅನಿವಾರ್ಯತೆ ಇರುವ ಕಾರಣ ರೆಪೊ ದರದಲ್ಲಿ 40 ಮೂಲಾಂಶ ಹೆಚ್ಚಳ ಮಾಡಲಾಗಿದ್ದು, ರೆಪೊ ದರವನ್ನು ಶೇ 4.40ಕ್ಕೆ ನಿಗದಿಪಡಿಸಲಾಗಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಇಂದು ಘೊಷಣೆ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಅಚ್ಚರಿಯ ಆಘಾತ ನೀಡಿದ್ದಾರೆ.

2019ರಿಂದೀಚೆಗೆ ಆರ್ಬಿಐ ಇದೇ ಮೊದಲ ಬಾರಿಗೆ ಬಡ್ಡಿದರವನ್ನು ಏರಿಕೆ ಮಾಡಿದೆ. ಇದುವರೆಗೂ ಬಡ್ಡಿದರ ಕನಿಷ್ಟಮಟ್ಟದಲ್ಲೇ ಇತ್ತು. ರೆಪೊ ದರ ಏರಿಕೆಯಿಂದಾಗಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಬಹುತೇಕ ಎಲ್ಲಾ ಸಾಲಗಳ ಮೇಲಿನ ಬಡ್ಡಿ ದರಗಳೂ ಏರಿಕೆಯಾಗಲಿವೆ. ಗ್ರಾಹಕರು ತಾವು ಸಾಲದ ಮೇಲೆ ಪಾವತಿಸುವ ಇಎಂಐ (ಸಮಾನ ಮಾಸಿಕ ಕಂತುಗಳು) ಮೊತ್ತ ಕೂಡಾ ಹೆಚ್ಚಾಗಲಿದೆ.

ಏಪ್ರಿಲ್ ತಿಂಗಳ ಹಣಕಾಸು ನೀತಿ ಸಮಿತಿ ಪರಾಮರ್ಶೆ ವೇಳೆ ಬಡ್ಡಿ ಏರಿಕೆ ನಿರೀಕ್ಷಿಸಲಾಗಿತ್ತು. ಆದರೆ, ಬಡ್ಡಿ ಏರಿಕೆ ಮಾಡದೇ ಅಚ್ಚರಿ ಮೂಡಿಸಿದ್ದ ಗವರ್ನರ್ ಶಕ್ತಿಕಾಂತ ದಾಸ್, ಈಗ ಬಡ್ಡಿ ದರ ಏರಿಕೆ ಘೋಷಿಸಿದ್ದಾರೆ. ಸಾಮಾನ್ಯವಾಗಿ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಸಭೆಯ ನಂತರ ಬಡ್ಡಿದರ ಏರಿಕೆ ಪ್ರಕಟಿಸಲಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಹೀಗೆ ಅನಿರೀಕ್ಷಿತವಾಗಿ ಬಡ್ಡಿದರ ಏರಿಕೆ ಮಾಡಲಾಗುತ್ತದೆ.

ಅಮೆರಿಕದ ಫೆಡರಲ್ ರಿಸರ್ಪ್ (ಕೇಂದ್ರೀಯ ಬ್ಯಾಂಕ್) ಕೂಡಾ ಬಡ್ಡಿ ದರ ಏರಿಸುವ ನಿರೀಕ್ಷೆ ಇದೆ. ಬಡ್ಡಿದರ ಏರಿಕೆಗೆ ಷೇರು ಮಾರುಕಟ್ಟೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿದೆ. ಸೆನ್ಸೆಕ್ಸ್, ನಿಫ್ಟಿ ಮತ್ತು ಬ್ಯಾಂಕ್ ನಿಫ್ಟಿ ಸೂಚ್ಯಂಕಗಳು ಶೇ.1.50ರಿಂದ ಶೇ.2ರಷ್ಟು ಕುಸಿತ ದಾಖಲಿಸಿದವು.

Share Post