ಇದು ಕೊರೊನಾ ಬಜೆಟ್, ಪಿಕ್ ಪಾಕೆಟ್ ಬಜೆಟ್; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ
ಬೆಂಗಳೂರು: ರಾಜ್ಯದ ಹೆಸರೇ ಇಲ್ಲ ಬಜೆಟ್‌ನ್ನು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ದೇಶದಲ್ಲಿ ಕೊರೊನಾದಿಂದ ಜನರು ನರಳುತ್ತಿದ್ದಾರೆ. ಈ ಬಜೆಟ್ ಕೂಡಾ ಅದೇ ರೀತಿಯಲ್ಲಿ ನರಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮತನಾಡಿದ ಅವರು, ರಾಜ್ಯಕ್ಕೆ ಯೋಜನೆಗಳ ಸುರಿಮಳೆಯನ್ನೇ ಸುರಿಸಲು ಕಾರಣರಾದ ಸಿಎಂ ಬೊಮ್ಮಾಯಿ, 25 ಸಂಸದರು ಹಾಗೂ ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಮೊದಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಹೇಳುತ್ತಿದ್ದರು. ಆದ್ರೆ ಈಗ ಅದು ಅರವತ್ತು ಲಕ್ಷಕ್ಕೆ ಇಳಿದಿದೆ. ಇದರಲ್ಲೇ ಗೊತ್ತಾಗುತ್ತದೆ ಅವರ ಬಂಡವಾಳ. ರೈತರಿಗಾಗಲೀ, ಮಧ್ಯಮ ವರ್ಗವದರಿಗಾಗಲೀ ಈ ಬಜೆಟ್‌ನಿಂದ ಏನಾದರೂ ಉಪಯೋಗವಿದೆಯಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.