ವೀಸಾಗಾಗಿ ಲಂಚ ಆರೋಪ; ಸತತ ಮೂರನೇ ದಿನ ಕಾರ್ತಿ ಚಿದಂಬರಂ ವಿಚಾರಣೆ
ನವದೆಹಲಿ: ಚೀನಾದ 263 ಮಂದಿಗೆ ವೀಸಾ ಕೊಡಿಸಲು ಲಂಚ ಪಡೆದಿದ್ದಾರೆಂಬ ಆರೋಪಕ್ಕೆ ಸಂಬಂಧ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಪುತ್ರ, ಸಂಸದ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಸತತ ಮೂರನೇ ದಿನವೂ ವಿಚಾರಣೆಗೆ ಒಳಪಡಿಸಿದರು. ಶನಿವಾರ ಬೆಳಿಗ್ಗೆಯೇ ಕಾರ್ತಿ ಚಿದಂಬರಂ ಅವರು ಸಿಬಿಐ ಪ್ರಧಾನ ಕಚೇರಿಗೆ ಆಗಮಿಸಿ ವಿಚಾರಣೆಗೆ ಹಾಜರಾದರು. ವಿಚಾರಣೆ ಸಂಜೆಯವರೆಗೆ ಮುಂದುರಿಯುವ ಸಾಧ್ಯತೆ ಇದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ತಿ ಅವರು 2011ರಲ್ಲಿ ಅವರ ತಂದೆ ಚಿದಂಬರಂ ಗೃಹ ಸಚಿವರಾಗಿದ್ದ ಅವಧಿಯಲ್ಲಿ ಚೀನಾದ 263 ಮಂದಿಗೆ ವೀಸಾ ಕೊಡಿಸಿದ್ದರು. ಇದರಲ್ಲಿ ಕಾರ್ತಿ ಮತ್ತು ಅವರ ಆಪ್ತ ಎಸ್.ಭಾಸ್ಕರ ರಾಮನ್ ₹50 ಲಕ್ಷ ಲಂಚ ಪಡೆದಿದ್ದಾರೆ ಎಂಬ ಆರೋಪವಿದ್ದು, ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಕಾರ್ತಿ ಚಿದಂಬರಂ ವಿರುದ್ಧ ರಾಜಕೀಯ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.