ಯುವನಿಧಿ ಯೋಜನೆಗೆ ಶಿವಮೊಗ್ಗದಲ್ಲಿ ಚಾಲನೆ; ಸರ್ಕಾರದ ಐದೂ ಗ್ಯಾರೆಂಟಿ ಅನುಷ್ಠಾನ
ಶಿವಮೊಗ್ಗ; ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಹಾಗೂ ಕೊನೆಯ ಗ್ಯಾರೆಂಟಿ ಯುವನಿಧಿಯನ್ನು ಇಂದು ಅನುಷ್ಠಾನಕ್ಕೆ ತರಲಾಗಿದೆ. ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಯೋಜನೆಗೆ ಚಾಲನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ಸಂಪುಟದ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಚಿತ್ರದುರ್ಗ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಗಳಿಂದ ಲಕ್ಷಾಂತರ ಜನರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣೆಗಾಗಿ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿಲ್ಲ. ನಿರುದ್ಯೋಗಿ ಯುವಕರಿಗೆ ನೆರವಾಗಬೇಕೆಂಬ ಉದ್ದೇಶದಿಂದಷ್ಟೇ ಈ ಯೋಜನೆ ಜಾರಿಗೊಳಿಸಲಾಗಿದೆ. ದೇಶದಲ್ಲಿ ದಿನಬಳಕೆ, ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದೆ. ಜನಸಮಾನ್ಯರಿಗೆ ಖರೀದಿಸುವ ಸಾಮರ್ಥ್ಯವಿಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೆಲ ವಿದ್ಯಾರ್ಥಿಗಳು ಶ್ರೀರಾಮ, ಮೋದಿ ಮತ್ತು ಯೋಗಿ ಪರವಾಗಿ ಘೋಷಣೆಗಳು ಕೂಗಿದರು. ಇದರಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.