ಬೈಕ್ನಲ್ಲಿ ಹೋಗುತ್ತಿದ್ದ ಯುವಕನ ಬರ್ಬರ ಹತ್ಯೆ
ಕಲಬುರಗಿ; ಇಲ್ಲಿನ ಜೇವರ್ಗಿ ರಸ್ತೆಯಲ್ಲಿ ಯುವಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪಿಎನ್ಟಿ ಕ್ರಾಸ್ ಹತ್ತಿರ ಈ ಭಯಾನಕ ಕೃತ್ಯ ನಡೆದಿದ್ದು, ಹಂತಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೌಸಿಂಗ್ ಬೋರ್ಡ್ ಕಾಲೋನಿಯ ಜಮೀರ್ (23) ಎಂಬಾತನನ್ನು ನಿನ್ನೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜಮೀರ್ ಬೈಕ್ನಲ್ಲಿ ಹೋಗುತ್ತಿದ್ದಾಗ ಬೆನ್ನಟ್ಟಿದ ಇಬ್ಬರು ದುಷ್ಕರ್ಮಿಗಳು ಜೀವನ ಪ್ರಕಾಶ ಶಾಲೆ ಬಳಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ಜಮೀರ್ ಕೊಲೆ ಹಿಂದೆ ಪ್ರೀತಿ ವಿಚಾರ ಇದೆ ಎಂದು ಹೇಳಲಾಗುತ್ತಿದೆ. ಮನೆ ಹತ್ತಿರದಲ್ಲೇ ವಾಸವಿದ್ದ ಯುವತಿ ಮತ್ತು ಜಮೀರ್ ಪರಸ್ಪರ ಪ್ರೀತಿ ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ. ಈ ವಿಷಯ ಯುವತಿ ಪೋಷಕರಿಗೆ ಗೊತ್ತಾಗಿ ವಾರ್ನಿಂಗ್ ಕೂಡ ನೀಡಿದ್ದರಂತೆ. ಆದರೂ ಪ್ರೀತಿ ಮುಂದುವರೆದಾಗ ಬೇಸರಗೊಂಡ ಯುವತಿ ಪೋಷಕರು ಬೇರೆ ಬಡಾವಣೆಗೆ ಶಿಫ್ಟ್ ಆಗಿದ್ದರು.
ಇಷ್ಟಾದರೂ, ಇಬ್ಬರ ನಡುವಿನ ಪ್ರೀತಿ ಮುಂದುವರೆದು ಭೇಟಿಯಾಗುತ್ತಿದ್ದರು. ಅದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗ್ತಿದೆ. ಇನ್ನೊಂದೆಡೆ, ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಹಿತರೇ ಜಮೀರ್ ಕೊಲೆ ಮಾಡಿದ್ದಾರೆ ಎಂದೂ ಸಹ ಶಂಕಿಸಲಾಗುತ್ತಿದೆ.