ನಾಳೆ ಯದುವೀರ್‌ರಿಂದ ಮೈಸೂರಲ್ಲಿ ಪಾದಯಾತ್ರೆ; ಸಾವಿರಾರು ಜನ ಭಾಗಿ ಸಾಧ್ಯತೆ
ಮೈಸೂರು; ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ನಾಳೆ ಬೀದಿಗಿಳಿಯುತ್ತಿದ್ದಾರೆ. ಸಾವಿರಾರು ಜನರೊಂದಿಗೆ ಸೇರಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ದೇವರಾಜ ಮಾರುಕಟ್ಟೆ ಬಳಿಯ ಚಿಕ್ಕ ಗಡಿಯಾರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಯದುವೀರ್ ಪಾದಯಾತ್ರೆ ನಡೆಸಲಿದ್ದಾರೆ.
ಪಾರಂಪರಿಕ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡವನ್ನು ನೆಲಸಮ ಮಾಡಲು ಹೆರಿಟೇಜ್ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಆದ್ರೆ ಇದಕ್ಕೆ ಯದುವೀರ್ ವಿರೋಧ ವ್ಯಕ್ತಪಡಿಸಿದ್ದಾರೆ. ಪಾರಂಪರಿಕ ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಳೆ ಯದುವೀರ್ ಅವರು ಪಾದಯಾತ್ರೆ ನಡೆಸಲಿದ್ದು, ಇದರಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಎರಡೂ ಕಟ್ಟಡಗಳು ಸಾಕಷ್ಟು ಹಳೆಯದಾಗಿವೆ. ಕುಸಿದು ಬೀಳುವ ಅಪಾಯವಿದೆ. ಹೀಗಾಗಿ ಎರಡೂ ಕಟ್ಟಡಗಳನ್ನು ಒಡೆದು, ಮೂಲ ರೂಪದಲ್ಲಿಯೇ ಕಟ್ಟಡಗಳನ್ನು ಕಟ್ಟುವಂತೆ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ರಾಜಮನೆತನ ಹಾಗೂ ಕೆಲ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.