ಡಿಸಿ ಕಚೇರಿಯಲ್ಲೇ ಮೂವರು ಹೆಣ್ಣು ಮಕ್ಕಳ ಜೊತೆ ಫಿನಾಯಿಲ್ ಕುಡಿದ ಮಹಿಳೆ
ಬೆಳಗಾವಿ; ಸಾಲಗಾರರ ಕಾಟದಿಂದ ಗಂಡ ತಲೆಮರೆಸಿಕೊಂಡಿದ್ದು ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕಚೇರಿಯಲ್ಲೇ ಮೂವರು ಹೆಣ್ಣುಮಕ್ಕಳ ಜೊತೆ ಮಹಿಳೆ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಎಚ್ಚೆತ್ತುಕೊಂಡು ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ. ನಾಲ್ವರೂ ಅಸ್ವಸ್ಥಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅನಗೋಳದ ನಿವಾಸಿ ಸರಸ್ವತಿ(40) ಹಾಗೂ ಅವರ ಮಕ್ಕಳಾದ ಸೃಷ್ಟಿ (14), ಸಾಕ್ಷಿ (8) ಮತ್ತು ಸಾನ್ವಿ (3) ಆತ್ಮಹತ್ಯೆಗೆ ಯತ್ನಿಸಿದವರು. ಸರಸ್ವತಿ ಹಾಗೂ ಅದೃಶ್ಯಪ್ಪ ಅವರ ಕುಟುಂಬ ಬೆಳಗಾವಿ ನಗರದಲ್ಲಿ ನೆಲೆಸಿದ್ದು, ಅದೃಶ್ಯಪ್ಪ ಸೆಲೂನ್ನಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಜೀವಾನ ನಿರ್ವಹಣೆಗೆ ಆಗುವಷ್ಟು ಸಂಪಾದನೆಯಾಗದಿದ್ದುರಿಂದ ಅದೃಶ್ಯಪ್ಪ ಹಲವೆಡೆ ಸಾಲ ಮಾಡಿದ್ದರಂತೆ. ಹೀಗಾಗಿ ಸಾಲಗಾರರ ಕಾಟ ತಾಳಲಾರದೆ ಅವರು ನಾಪತ್ತೆಯಾಗಿದ್ದಾರೆ. ಆದರೂ ಸಾಲಗಾರರು ಮನೆಗೆ ಬರುತ್ತಿದ್ದಾರೆ. ಇತ್ತ ಮಕ್ಕಳಿಗೆ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದಂತಾಗಿದೆ ಎಂದು ಸಹಾಯಕೋರಿ ಮಹಿಳೆ ಮಕ್ಕಳೊಂದಿಗೆ ಡಿಸಿ ಕಚೇರಿಗೆ ಬಂದಿದ್ದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಕಾಯುವಂತೆ ಸಿಬ್ಬಂದಿ ಹೇಳಿದ್ದರು. ಇದೇ ವೇಲೆ ಮೂವರೂ ಮಕ್ಕಳು ಅಸ್ವಸ್ಥಗೊಂಡು, ವಾಂತಿ ಮಾಡತೊಡಗಿದರು. ಈ ವೇಳೆ ಸಿಬ್ಬಂದಿ ಬಂದು ಕೇಳಿದಾಗ ನಮ್ಮ ತಾಯಿ ಜ್ಯೂಸ್ ಎಂದು ಏನನ್ನೋ ಕುಡಿಸಿದ್ದಾಳೆ ಎಂದು ಹೇಳಿದ್ದಾರೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ನಾಲ್ವರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ. ಎಲ್ಲರೂ ಫಿನಾಯಿಲ್ ಕುಡಿದಿದ್ದರೆಂದು ತಿಳಿದುಬಂದಿದೆ.