ನಾಗರಕಟ್ಟೆಗೆ ಉಚಿತವಾಗಿ ಜಾಗ ಕೊಟ್ಟ ಯು.ಟಿ.ಖಾದರ್; ಇದು ಸಾಮರಸ್ಯದ ಸಂಕೇತ
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆ ಎಂದಾಕ್ಷಣ ನೆನಪಾಗೋದು ಕೋಮು ಗಲಾಟೆಗಳು. ಈ ಭಾಗದಲ್ಲಿ ಆಗಾಗ ಎರಡು ಕೋಮಿನ ನಡುವೆ ಘರ್ಷಣೆಗಳು ನಡೆಯುತ್ತಿರುತ್ತವೆ. ಆದ್ರೆ ಇದರ ನಡುವೆ, ಇಲ್ಲಿ ಕೋಮು ಸಾರಮಸ್ಯ ಇದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತದೆ. ಅದರಲ್ಲೊಂದು ನಾಗಾರಾಧನೆಗೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ಸ್ಥಳವನ್ನು ಉಚಿತವಾಗಿ ನೀಡಿರುವುದು.
ಇಂದು ನಾಗರ ಪಂಚಮಿಯಾದ್ದರಿಂದ ಇದನ್ನು ನೆನಪಿಸಿಕೊಳ್ಳಲೇಬೇಕು. ವಿಟ್ಲ ಸಮೀಪದ ಪುಣಚ ಪರಿಯಾಲ್ತಡ್ಕ ಎಂಬಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸೇರಿದ ಜಮೀನಿದೆ. ಅದರಲ್ಲಿ ಅಡಿಗೆ, ತೆಂಗು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದೇ ಜಮೀನನ ಒಂದು ಭಾಗದಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ನಾಗರ ಪಂಚಮಿ ನಡೆಯುತ್ತದೆ. ಈ ವರ್ಷವೂ ಕೂಡಾ ಇಲ್ಲಿ ಅದ್ದೂರಿ ನಾಗರ ಪಂಚಮಿ ನಡೆದಿದೆ.
ಅಂದಹಾಗೆ, ಹಲವು ತಲೆಮಾರುಗಳ ಹಿಂದೆ ಈ ಜಮೀನು ದಳವಾಯಿಯವರ ಕುಟುಂಬದ ಅಧೀನದಲ್ಲಿತ್ತಂತೆ. ಆ ಸಂದರ್ಭದಲ್ಲಿ ಇಲ್ಲಿ ದಳವಾಯಿ ಕುಟುಂಬ ನಾಗರ ಪಂಚಮಿ ಆಚರಣೆ ಮಾಡುತ್ತಿತ್ತು. ಆದ್ರೆ ತಿದ್ದುಪಡಿಯಾದ ಭೂಮಸೂದೆಯಿಂದಾಗಿ ಖಾದರ್ ಕುಟುಂಬದ ಹಿರಿಯರಿಗೆ ಈ ಜಮೀನು ಸಿಕ್ಕಿತ್ತು. ಅನಂತರ ತಲೆಮಾರುಗಳಲ್ಲಿ ಅದು ಪಾಲು ಮಾಡುವಾಗ ಪಿತ್ರಾರ್ಜಿತ ಸೊತ್ತಾಗಿ ಖಾದರ್ ಅವರಿಗೆ ಈ ಜಮೀನು ಬಂದಿತ್ತು.
ಆದ್ರೆ, ದಳವಾಯಿ ಕುಟುಂಬದ ನಾಗನ ಕಟ್ಟೆ ಅದೇ ಜಮೀನಲ್ಲಿತ್ತು. ದಳವಾಯಿ ಕುಟುಂಬದ ನಾಗಸಾನಿಧ್ಯ ಮುಸ್ಲಿಂ ಧರ್ಮದವರ ಸ್ಥಳದಲ್ಲಿರುವುದರಿಂದ ಅವರು ಬೇರೆ ಕಡೆ ಆರಾಧನೆ ಮಾಡುತ್ತಿದ್ದರು. ಮೂಲಸ್ಥಾನದ ನಾಗನಕಟ್ಟೆಯಲ್ಲಿ ಪೂಜೆಯಾಗದೇ ಇರುವುದರಿಂದ ದಳವಾಯಿ ಕುಟುಂಬಕ್ಕೆ ಸಮಸ್ಯೆ ತಲೆದೋರಿತ್ತು. ಅಷ್ಟಮಂಗಳ ಪ್ರಶ್ನೆ ಇಟ್ಟಾಗ ಮೂಲ ಜಾಗದಲ್ಲಿ ಪೂಜೆ ನಡೆಯಬೇಕೆಂದು ಕಂಡು ಬಂತಾದರೂ ಅವರಿಗೆ ಆರಾಧನೆಗೆ ತೊಡಕಾಗಿತ್ತು. ಕೊನೆಗೂ ಬೇರೆ ದಾರಿ ಕಾಣದೆ ದಳವಾಯಿ ಕುಟುಂಬ ನಾಗನಕಟ್ಟೆಯ ಆ ಜಾಗದ 10 ಸೆಂಟ್ಸ್ ಸ್ಥಳ ಖರೀದಿಗೆ ಯು.ಟಿ.ಖಾದರ್ ಅವರಿಗೆ ಬೇಡಿಕೆ ಇಟ್ಟಿತು.
ವಿಷಯ ತಿಳಿದ ಖಾದರ್ 10ಕ್ಕೆ 10 ಸೆಂಟ್ಸ್ ಸೇರಿಸಿ ಒಟ್ಟು 20 ಸೆಂಟ್ಸ್ ಸ್ಥಳವನ್ನು ದಳವಾಯಿ ಕುಟುಂಬಕ್ಕೆ ಉಚಿತವಾಗಿ ಬಿಟ್ಟುಕೊಟ್ಟು ಉದಾರತೆ, ಮಾನವೀಯತೆ ಮೆರೆದರು. ಇದೀಗ ಹಲವು ವರ್ಷಗಳಿಂದ ಅಲ್ಲಿ ವಿಜೃಂಬಣೆಯಿಂದ ನಾಗಾರಾಧನೆ ನಡೆಯುತ್ತಿದೆ. ನಾಗರ ಪಂಚಮಿಯ ಈ ದಿನ ದಳವಾಯಿ ಕುಟುಂಬಿಕರೆಲ್ಲಾ ಅಲ್ಲಿ ಬಂದು ಸೇರುತ್ತಾರೆ. ಪೂಜೆ ಪುನಸ್ಕಾರಗಳು ಸಾಂಗವಾಗಿ ನಡೆಯುತ್ತವೆ. ಸ್ಪೀಕರ್ ಯು.ಟಿ.ಖಾದರ್ ಅವರು ಸಹೋದರ ಧರ್ಮಗಳ ಜೊತೆಗಿನ ಬಾಂಧವ್ಯಕ್ಕೂ ಎಷ್ಟು ಗೌರವ ಕೊಡುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.