ಮೋದಿ ಆಗಮನ ಹಿನ್ನೆಲೆ; ನಾಳೆಯಿಂದ ಮೈಸೂರು ಅರಮನೆ ಪ್ರವೇಶ ನಿಷೇಧ
ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜೂನ್ 21 ರಂದು ಯೋಗಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಇದರ ಭಾಗವಾಗಿ ನಾಳೆಯಿಂದ ಮೂರು ದಿನ ಮೈಸೂರು ಅರಮನೆ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧ ಮಾಡಲಾಗಿದೆ.
ಜೂನ್ 19ರಿಂದ ಜೂನ್ 21ರ ಮಧ್ಯಾಹ್ನ 12ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧವಿರಲಿದೆ. ಅರಮನೆ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಪೂರ್ವ ಸಿದ್ಧತೆ ಕೈಗೊಳ್ಳಬೇಕಿರುವುದರಿಂದಾಗಿ ನಿರ್ಬಂಧ ವಿಧಿಸಲಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನೂ ಜೂನ್ 22ರವರೆಗೆ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಅರಮನೆ ಮಂಡಳಿ ತಿಳಿಸಿದೆ.