CrimeDistricts

ಮಗಳನ್ನು ಕೊಡ್ತೀವಿ ಅಂತ 25 ಲಕ್ಷ ಕಿತ್ತರು!; ಸುಳ್ಳು ಆರೋಪ ಮಾಡಿ ಜೈಲಿಗೆ ಕಳುಹಿಸಿದರು!

ಮೈಸೂರು; ಮಗಳನ್ನು ಮದುವೆ ಮಾಡಿಕೊಡುವುದಾಗಿ ಯುವಕನೊಬ್ಬನಿಗೆ ನಂಬಿಸಿದ್ದರು. ಆತನಿಂದ ಹಂತ ಹಂತವಾಗಿ 25 ಲಕ್ಷ ರೂಪಾಯಿ ಹಣ ಪಡೆದರು. ನಂತರ ಮದುವೆ ಮಾಡಿಕೊ೦ಡದೇ ನಾಟಕವಾಡಿದರು. ಮದುವೆ ಮಾಡಿಕೊಡಿ, ಇಲ್ಲವೇ ನನ್ನ ಹಣ ನನಗೆ ವಾಪಸ್‌ ಕೊಡಿ ಎಂದಾಗ 850 ಅಡಿಕೆ ಮರ ಕಡಿದಿದ್ದಾನೆ ಎಂದು ದೂರು ದಾಖಲಿಸಿ ಜೈಲಿಗೆ ಕಳುಹಿಸಿದರು. ಈ ಘಟನೆ ನಡೆದಿರೋದು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಡೇಮನಗುನಹಳ್ಳಿ ಗ್ರಾಮದಲ್ಲಿ.

೨೦೨೩ರ ಆಗಸ್ಟ್‌ ೧೦ರಂದು ೮೫೦ ಅಡಿಕೆ ಮರ ಕಡಿದಿದ್ದಾನೆಂದು ಅಶೋಕ್‌ ಎಂಬಾತನ ವಿರುದ್ಧ ವೆಂಕಟೇಶ್, ಲಕ್ಷ್ಮಿ ದಂಪತಿ ದೂರು ನೀಡಿದ್ದರು. ಈ ಸಂಬಂಧ ಅಶೋಕ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಇದಾದ ಮೇಲೆ ಬೇಲ್‌ ಮೇಲೆ ಹೊರಬಂದಿರುವ ಅಶೋಕ್‌, ನಿಜ ವಿಷಯವನ್ನು ಬಯಲಿಗೆ ತಂದಿದ್ದಾರೆ. ಅದಕ್ಕೆ ವಾಟ್ಸಾಪ್‌ ಮೆಸೇಜ್‌ಗಳ ದಾಖಲೆಯನ್ನು ನೀಡಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ಕೂಡಾ ನೀಡಿದ್ದಾರೆ.

ವೆಂಕಟೇಶ್, ಲಕ್ಷ್ಮಿ ದಂಪತಿ ತಮ್ಮ ಮಗಳನ್ನು ಮದುವೆ ಮಾಡಿಕೊಡುವುದಾಗಿ ಅಶೋಕ್‌ಗೆ ಹೇಳಿದ್ದರು. ಅನಂತರ ಅಶೋಕ್‌ ಬಳಿ ಹುಡುಗಿ 2 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾಳೆ. ಇದಾದ ಮೇಲೆ ಆಕೆಯ ತಂದೆ ವೆಂಕಟೇಶ್‌ ಕೂಡಾ 15 ಲಕ್ಷ ರೂಪಾಯಿ ಪಡೆದಿದ್ದಾರೆ. ತಾಯಿ ಲಕ್ಷ್ಮೀ 8 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಹೀಗೆ ಒಟ್ಟು 25 ಲಕ್ಷ ರೂಪಾಯಿಯನ್ನು ಅಶೋಕ್‌ ಬಳಿಯಿಂದ ಪಡೆದಿದ್ದಾರೆ. ಅನಂತರ ಮದುವೆ ಮಾಡಿಕೊಡದೇ ಸತಾಯಿಸಿದ್ದಾರೆ. ಈ ವೇಳೆ ಅಶೋಕ್‌ ನನ್ನ ಹಣ ವಾಪಸ್‌ ಕೊಡಿ ಎಂದು ಹೇಳಿದ್ದಾರೆ. ಈ ವೇಳೆ ವೆಂಕಟೇಶ್‌ ಕುಟುಂಬ ನನ್ನ ಮೇಲೆ ಅಡಿಕೆ ಮರ ಕಡಿದ ಆರೋಪ ಹೊರಿಸಿ ಜೈಲಿಗೆ ಕಳುಹಿಸಿದೆ ಎಂದು ಅಶೋಕ್‌ ಆರೋಪ ಮಾಡುತ್ತಿದ್ದಾನೆ.

ಅಶೋಕ್‌ ದೂರು ದಾಖಲಿಸಿದ್ದರೂ ಪೊಲೀಸರು ಇನ್ನೂ ನ್ಯಾಯ ಕೊಡಿಸಿಲ್ಲವಂತೆ. ಇದರಿಂದ ಬೇಸತ್ತ ಅಶೋಕ್ ಹೆಣ್ಣಿಗೊಂದು ನ್ಯಾಯ, ನನಗೊಂದು ನ್ಯಾಯ ಎಂದು ಪ್ರಶ್ನೆ ಮಾಡುತ್ತಿದ್ದಾನೆ. ನ್ಯಾಯಕ್ಕಾಗಿ ಹುಡುಗಿ ಮನೆ ಮುಂದೆ ಧರಣಿ ಕೂರಲು ಅಶೋಕ್ ನಿರ್ಧರಿಸಿದ್ದಾನೆ.

Share Post