ಕಲಬುರಗಿಯಲ್ಲಿ ಶೀಘ್ರದಲ್ಲೇ ಜವಳಿ ಪಾರ್ಕ್ ಸ್ಥಾಪನೆ; ಸಚಿವ ಮುರುಗೇಶ್ ನಿರಾಣಿ
ಕಲಬುರಗಿ: ಕಲಬುರಗಿಯಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಸಲುವಾಗಿ ಜವಳಿ ಪಾಕ್೯ (ಟೆಕ್ಸ್ ಟೈಲ್) ಪ್ರಾರಂಭಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಘೋಷಿಸಿದ್ದಾರೆ.
ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ನಡೆದ ಉದ್ಯಮಿಯಾಗು ,ಉದ್ಯೋಗ ನೀಡು ಹಾಗೂ ಕೈಗಾರಿಕಾ ಆದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಲಬುರಗಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಸಂಬಂಧ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸಲಾಗಿದೆ. ಕೇಂದ್ರದಿಂದ ನಮಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಭಾಗಗಳಾದ ರಾಯಚೂರು, ಕೊಪ್ಪಳ, ಬೀದರ್ ಸೇರಿದಂತೆ ಈ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹತ್ತಿಯನ್ನು ಯಥೇಚ್ಚವಾಗಿ ಬೆಳೆಯುತ್ತಾರೆ. ಇಲ್ಲಿ ಜವಳಿ ಪಾರ್ಕ್ ಪ್ರಾರಂಭವಾದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.