ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣವೇ ಗೊತ್ತಿಲ್ಲ, ಅವರು ನನ್ನಷ್ಟು ಪಳಗಿಲ್ಲ; ಜಿ.ಟಿ.ದೇವೇಗೌಡ
ಮೈಸೂರು; ಚಾಮುಂಡೇಶ್ವರಿಯಲ್ಲಿ ನನ್ನ ವಿರುದ್ಧ ಮಾವಿನಹಳ್ಳಿ ಸಿದ್ದೇಗೌಡರನ್ನು ನಿಲ್ಲಿಸಿದ್ದರು. ಇದನ್ನು ನೋಡಿದರೇನೇ ಗೊತ್ತಾಗುತ್ತೆ, ಸಿದ್ದರಾಯ್ಯಗೆ ಚಾಮುಂಡೇಶ್ವರಿ ರಾಜಕಾರಣವೇ ಗೊತ್ತಿಲ್ಲ ಅನ್ನೋದು ಅಂತ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾವಿನಹಳ್ಳಿ ಸಿದ್ದೇಗೌಡರನ್ನು ಕಣಕ್ಕಿಳಿಸಲಾಗಿತ್ತು. ಆದ್ರೆ ಅವರು ಕಳೆದ ಮೂರ್ನಾಲ್ಕು ದಿನಗಳಿಂದ ಕಾರ್ಯಕರ್ತರ ಕೈಗೇ ಸಿಕ್ಕಿಲ್ಲ. ಹೀಗಾಗಿ ಅವನು ಮೋಸಗಾರ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡರು, ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣ ಗೊತ್ತಿಲ್ಲ, ನನ್ನಷ್ಟು ಅವರು ಪಳಗಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಇಷ್ಟು ವರ್ಷಗಳ ಕಾಲ ರಾಜಕಾರಣ ಮಾಡಿದ್ದಾರೆ. ಆದ್ರೆ ನನ್ನ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಅನ್ನೋದು ಅವರಿಗೆ ಗೊತ್ತಿಲ್ಲ. ತಾಲ್ಲೂಕು ಪಂಚಾಯತ್ ಹಾಗೂ ಎಪಿಎಂಸಿಯಲ್ಲಿ ಅಪ್ಪ, ಮಕ್ಕಳು ಸೋತು ಸುಣ್ಣವಾಗಿದ್ದರು. ಸಣ್ಣ ಚುನಾವಣೆಯಲ್ಲೇ ಗೆಲ್ಲಲಾಗದವರನ್ನು ಕರ್ಕೊಂಡು ಬಂದು ನನ್ನ ವಿರುದ್ಧ ನಿಲ್ಲಿಸಿದ್ದಾರೆ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಮರಿಗೌಡ ಅವರು ಸಿದ್ದರಾಮಯ್ಯ ಅವರಿಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ್ದರು. ಒಕ್ಕಲಿಗರಿಗೇ ಕೊಡುವುದಿದ್ದರೆ ನರಸೇಗೌಡ ಇದ್ದರು, ಕೃಷ್ಣಸಾಗರ್ ಇದ್ದರು, ಸತ್ಯಪ್ಪ ಅವರ ಮಗ ಅರುಣ್ ಇದ್ದರು. ಅವರಿಗೆ ಕೊಟ್ಟಿದ್ದಿದ್ದರೆ ಗೌರವಯುತವಾಗಿಯಾದರೂ ಸೋಲುತ್ತಿದ್ದರು ಎಂದು ಜಿ.ಟಿ.ದೇವೇಗೌಡರು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ. ಇನ್ನು ಮಾವಿನಹಳ್ಳಿ ಸಿದ್ದೇಗೌಡರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೂ ಜಿ.ಟಿ.ದೇವೇಗೌಡರು ತಿರುಗೇಟು ನೀಡಿದ್ದಾರೆ. ಆತನನ್ನು ನಾನು ಯಾಕೆ ಬುಕ್ ಮಾಡಲಿ. ಆತನನ್ನು ನನ್ನ ಗೇಟ್ ಬಳಿಯೂ ಸೇರಿಸೋದಿಲ್ಲ ಎಂದು ಹೇಳಿದರು.