ಗುರುವಾರದಿಂದ ಶಿವಮೊಗ್ಗ-ಬೆಂಗಳೂರು ವಿಮಾನಯಾನ ಸೇವೆ ಆರಂಭ
ಬೆಂಗಳೂರು; ಶಿವಮೊಗ್ಗದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ವಿಮಾನ ನಿಲ್ದಾಣದಿಂದ ವಿಮಾನಯಾನ ಸೇವೆಗಳು ಆರಂಭವಾಗಲಿವೆ. ಗುರುವಾರದಿಂದ ವಿಮಾನಗಳ ಕಾರ್ಯಾಚರಣೆ ಶುರುವಾಗಲಿದೆ. ಇದರಿಂದಾಗಿ ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳ ಆರ್ಥಿಕ ಹಾಗೂ ಕೈಗಾರಿಕಾ ಬೆಳವಣಿಗೆ ಆಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಈ ಬಗ್ಗೆ ಸಚಿವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೊದಲ ಹೆಜ್ಜೆಯಾಗಿ ಇಂಡಿಗೋ ಸಂಸ್ಥೆಯ ವಿಮಾನ ಗುರುವಾರ ಬೆಳಿಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮೊದಲಯಾನದಲ್ಲಿ ಸಚಿವ ಎಂ. ಬಿ ಪಾಟೀಲ್ ಪ್ರಯಾಣಿಸಲಿದ್ದು, ಜೊತೆಯಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳೂ ಇರಲಿದ್ದಾರೆ.