ಸರಣಿ ಹತ್ಯೆ ಹಿನ್ನೆಲೆ ಹೊಸ ಟ್ರಾಫಿಕ್ ರೂಲ್ಸ್; ಬೈಕ್ ಹಿಂಬದಿಯಲ್ಲಿ ಪುರುಷರು ಕೂರುವಂತಿಲ್ಲ..!
ಮಂಗಳೂರು; ಸರಣಿ ಕೊಲೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಿಚಿತ್ರವಾದ ಟ್ರಾಫಿಕ್ ರೂಲ್ಸ್ ಒಂದು ಜಾರಿಗೆ ತಂದಿದ್ದಾರೆ. ಇನ್ನು ಏಳು ದಿನಗಳ ಕಾಲ ಮಂಗಳೂರಿನಲ್ಲಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಪುರುಷರು ಕೂರಬಾರದು ಎಂದು ಸೂಚಿಸಲಾಗಿದೆ. ಏಳು ದಿನಗಳ ಕಾಲ ಪ್ರಾಯೋಗಿಕವಾಗಿ ಇದನ್ನು ಜಾರಿ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ತರಲು ಹೊಸ ರೂಲ್ಸ್ ಜಾರಿಗೆ ತರಲಾಗಿದೆ. ದ್ವಿಚಕ್ರಮ ವಾಹನ ಓಡಿಸುವ ಪುರುಷರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಜೊತೆಗೆ ಹಿಂಬದಿಯಲ್ಲಿ ಪುರುಷ ಸವಾರರು ಕೂರಬಾರದೆಂದು ಸೂಚಿಸಲಾಗಿದೆ. ಮಹಿಳೆಯರು, ೧೮ ವರ್ಷದೊಳಗಿನವರು ಹಾಗೂ ಹಿರಿಯ ನಾಗರಿಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಈ ಹಿಂದೆ ಇಂತಹ ರೂಲ್ಸ್ ಜಾರಿ ಮಾಡಲಾಗಿತ್ತು. ಅದನ್ನು ಇಲ್ಲಿ ಪ್ರಯೋಗ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಹಿಂದೂ ಪರ ಸಂಘಟನೆಯ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ.