ಬೆಳಗಾವಿ ಆಯ್ತು ಈಗ ಶಿವಮೊಗ್ಗ ಸರದಿ: ಗಾಂಧೀಜಿ ಸರಸ್ವತಿ ವಿಗ್ರಹಗಳು ಧ್ವಂಸ
ಶಿವಮೊಗ್ಗ: ಮೊನ್ನೆಯಷ್ಟೇ ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಎಂಇಎಸ್ ಪುಂಡಾಟಕ್ಕೆ ಸಂಗೊಳ್ಳಿ ರಾಯಣ್ಣ, ಮತ್ತು ನಾಡಧ್ವಜಕ್ಕೆ ಅಪಮಾನ ಆಗಿತ್ತು. ಈಗ ಆ ಘಟನೆ ಮಾಸುವ ಮುನ್ನವೇ ಕಲೆ, ಸಾಹಿತ್ಯ ಸಾಂಸ್ಕೃತಿಕ ಜಿಲ್ಲೆ ಎನಿಸಿಕೊಂಡಿರುವ ಶಿವಮೊಗ್ಗದಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿದೆ. ಸರ್ಕಾರಿ ಕನ್ನಡ ಶಾಲೆ ವಿದ್ಯಾದೇಗುಲ ಎನ್ನುತ್ತಾರೆ. ತೀರ್ಥಹಳ್ಳಿಉ ಹಾರೊಗೊಳಿಗೆ ಶಾಲೆಯ ಅಭಿವೃದ್ದಿಗಾಗಿ ಸ್ಥಳೀಯರು ಒಗ್ಗಟ್ಟಿನಿಂದ ಶಾಲೆ ಆವರಣದಲ್ಲಿ ಕೈದೋಟ ನಿರ್ಮಿಸಿ ಅಲ್ಲಿ ಸ್ವಾಮಿ ವಿವೇಕಾನಂದ, ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಮತ್ತು ಸರಸ್ವತಿ ದೇವಿಯ ವಿಗ್ರಹಗಳನ್ನು ಪ್ರತಿಷ್ಟಾಪನೆ ಮಾಡಿದ್ರೆ. ಆದ್ರೆ ನಿನ್ನೆ ರಾತ್ರಿ ಯಾರೋ ಕಿಡಿಗೇಡಿಗಳು ವಿಗ್ರಹಗಳನ್ನು ನಾಶ ಮಾಡಿದ್ದಾರೆ. ಆವರಣಕ್ಕೆ ನುಗ್ಗಿದ ದುಷ್ಕರ್ಮಿಗಳು ಶಾಲಾ ಹಿಂಭಾಗದಲ್ಲಿರುವ ಕೈತೋಟವನ್ನು ನಾಶಪಡಿಸಿದ್ದಾರೆ.
ರಣಹೇಡಿಗಳ ದುಷ್ಕೃತ್ಯದ ಫಲವಾಗಿ ಹಾರೊಗೊಳಿಗೆ ಶಾಲಾ ಆವರಣದಲ್ಲಿ ಈಗ ಆತಂಕದ ಛಾಯೆ ಮೂಡಿದೆ. ಇದೆಲ್ಲದಕ್ಕೂ ಕಾರಣ ಹಾರೊಗೊಳಿಗೆ ಮತ್ತು ಅದರ ಸುತ್ತಮುತ್ತಲಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟವೇ ಎನ್ನಲಾಗ್ತಿದೆ. ರಾತ್ರಿ ಹೊತ್ತು ಕುಡಿದು ಗಲಾಟೆ ಮಾಡುವುದು ಹಳ್ಳಿಯಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ ಇದರಿಂದ ಯಾರಿಗೂ ನೆಮ್ಮದಿಯಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಿಡಿಗೇಡಿಗಳ ವಿರುದ್ಧ ಹಾರೊಗೊಳಿಗೆ ಗ್ರಾಮ ಪಂಚಾಯಿತಿ ಮತ್ತು ಶಾಲಾ ಮಂಡಳಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.