ಕಾಂಗ್ರೆಸ್‌ನ ಉಚ್ಛಾಟಿತ ಮುಖಂಡ ಶರತ್ ರಾಮಣ್ಣ ಅರೆಸ್ಟ್
ಮಂಡ್ಯ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ನಾಗಮಂಗಲದ ಯುವ ರಾಜಕಾರಿಣಿ ಶರತ್ ರಾಮಣ್ಣ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಶ್ರವಣಬೆಳಗೊಳ ಮೂಲದ ವ್ಯಕ್ತಿಯೊಬ್ಬರಿಂದ ಪಿಎಸ್‌ಐ ಹುದ್ದೆ ಕೊಡಿಸಲು 40 ಲಕ್ಷ ರೂಪಾಯಿ ಪಡೆದ ಆರೋಪ ಶರತ್ ಮೇಲಿದೆ. ಈ ಕಾರಣದಿಂದಾಗಿ ಶರತ್ ಅವರನ್ನು ಬಂಧಿಸಲಾಗಿದ್ದು, ಆರೋಪಿಯನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಎಂ.ಟೆಕ್ ಪದವೀಧರರಾಗಿರುವ ಶರತ್ ರಾಮಣ್ಣ ಅವರು ನಾಗಮಂಗಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಆದ್ರೆ ಕಳೆದ ಲೋಕಸಭಾ ಚುನಾವಣೆ ವೇಳೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅವರ ಪರವಾಗಿ ಕೆಲಸ ಮಾಡಿದ್ದರಿಂದ ಶರತ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಉದ್ಯಮಿಯಾಗಿ, ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿರುವ ಶರತ್ ಅವರು ಚಿತ್ರ ನಿರ್ಮಾಪಕರೂ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ನಾಗಮಂಗಲ ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.
ಶರತ್ ರಾಮಣ್ಣ ಅವರು ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಆಪ್ತರಾಗಿದ್ದಾರೆ. ನಾಗಮಂಗಲದಲ್ಲಿ ಇವರ ಒಡೆತನದ ವಾಣಿಜ್ಯ ಕಟ್ಟಡದಲ್ಲೇ ತಾಲ್ಲೂಕು ಕಾಂಗ್ರೆಸ್ ಕಚೇರಿ, ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಅವರ ಕಚೇರಿ ಇದೆ.