ವಿಚಾರಣಾಧೀನ ಕೈದಿ ಗದಗ ಜಿಲ್ಲಾ ಕಾರಾಗೃಹದಲ್ಲಿ ನೇಣಿಗೆ ಶರಣು
ಗದಗ: ವಿಚಾರಣಾಧೀನ ಕೈದಿಯೊಬ್ಬ ಜಿಲ್ಲಾ ನ್ಯಾಯಾಲಯದಲ್ಲಿ ನೇಣಿಗೆ ಶರಣಾಗಿರುವ ಘಟನೆ ಗದಗದಲ್ಲಿ ನಡೆದಿದೆ. ಅಡವಿ ಸೋಮಾಪುರ ತಾಂಡಾಗೆ ಸೇರಿದ ರಾಜು ಪಾಂಡಪ್ಪ ಲಮಾಣಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡಾತ. ಮಧ್ಯರಾತ್ರಿ ಕಾರಾಗೃಹದ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರಾಜು ಲಮಾಣಿ, ಬಾಲಕಿಯೊಬ್ಬಳನ್ನು ಅಪಹರಿಸಿದ ಆರೋಪದ ಹಿನ್ನೆಲೆಯಲ್ಲಿ ಫೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ. ಬಾಲಕಿ ಮನೆಯವರು ಗುರುವಾರ ಜೈಲಿಗೆ ಬಂದು, ಜಾಮೀನು ಮೇಲೆ ಬಿಡುಗಡೆಯಾದರೂ ನಿನ್ನನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಈ ಕಾಣರಕ್ಕೆ ಹೆದರಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಮೃತ ರಾಜು ಲಮಾಣಿ ಅಡವಿ ಸೋಮಾಪುರ ಗ್ರಾಮದವಳೇ ಆದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ. ರಾಜು ಹಾಗೂ ಆ ಬಾಲಕಿ ನಾಪತ್ತೆಯಾಗಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಎಂಟು ದಿನಗಳ ನಂತರ ಇಬ್ಬರೂ ಪತ್ತೆಯಾಗಿದ್ದರು. ಆಗ ಪೊಲೀಸರ ವಿಚಾರಣೆ ವೇಳೆ ಬಾಲಕಿ, ರಾಜು ನಾನು ಬೆಂಗಳೂರು, ಗೋವಾಕ್ಕೆ ಹೋಗಿದ್ದೆವು. ಹೋದಲ್ಲೆಲ್ಲ ಜೊತೆಗಿದ್ದೆವು ಎಂದು ಹೇಳಿದ್ದಳು. ಈ ಕಾರಣಕ್ಕಾಗಿ ರಾಜುನನ್ನು ಬಂಧಿಸಲಾಗಿತ್ತು.
ನಿನ್ನೆಯಷ್ಟೇ ರಾಜುಗೆ ಜಾಮೀನು ಸಿಕ್ಕಿತ್ತು. ಆತ್ಮಹತ್ಯೆ ಮಾಡಿಕೊಳ್ಳದೆ ಇದ್ದಿದ್ದರೆ ಇಂದು ಆತ ಬಿಡುಗಡೆಯಾಗಬೇಕಿತ್ತು. ಆದ್ರೆ ಹೊರಬಂದರೆ ಯಾರು ಏನು ಮಾಡುತ್ತಾರೋ ಎಂಬ ಭಯದಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಲಾಗಿದೆ.