Districts

ನೋಟಿಸ್‌ ಸ್ವೀಕರಿಸದ ಡಿಕೆಶಿ; ಮನೆಗೆ ಅಂಟಿಸಿ ಹೋದ ಅಧಿಕಾರಿಗಳು..!

ರಾಮನಗರ; ಕೋರ್ಟ್‌ ಖಡಕ್‌ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿಯೇ ಅಧಿಕಾರಿಗಳು ಕನಕಪುರದಲ್ಲಿರುವ ಡಿ.ಕೆ.ಶಿವಕುಮಾರ್‌ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್‌ ಹಾಗೂ ಡಿ.ಕೆ.ಸುರೇಶ್‌ ಇಬ್ಬರೂ ಮನೆಯಲ್ಲೇ ಇದ್ದರು. ಆದರೆ ಅವರು ನೋಟಿಸ್‌ ಸ್ವೀಕರಿಸಲು ತಯಾರಿರಲಿಲ್ಲ. ಹೀಗಾಗಿ, ಮನೆಗೆ ನೋಟಿಸ್‌ ಅಂಟಿಸಿ ಬಂದಿದ್ದಾರೆ.
ಕಳೆದ ರಾತ್ರಿ ಸಿಎಂ ಬೊಮ್ಮಾಯಿಯವರ ಜೊತೆ ಚರ್ಚಿಸಿದ ನಂತರ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್‌, ಪಾದಯಾತ್ರೆ ನಡೆಸದಂತೆ ಸೂಚನೆ ನೀಡಿದ್ದರು. ಪಾದಯಾತ್ರೆ ಮುಂದುವರೆಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಮನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್‌ ಮನೆಗೆ ನೋಟಿಸ್‌ ಅಂಟಿಸಿ ಬಂದಿದ್ದಾರೆ.
ಮೇಕೆದಾಟು ಪಾದಯಾತ್ರೆ ಐದನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ರಾಮನಗರದಿಂದ ಪಾದಯಾತ್ರೆ ಮುಂದುವರೆಯಬೇಕಿದೆ. ಆದರೆ ಪಾದಯಾತ್ರೆ ಮುಂದುವರೆದರೆ, ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಈಗಾಗಲೇ ಸಿದ್ಧವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ.

Share Post