DistrictsPolitics

ಮುರುಗೇಶ್‌ ನಿರಾಣಿ ಮುಖ್ಯಮಂತ್ರಿಯಾಗುವುದು ಖಚಿತ; ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ

ಬಾಗಲಕೋಟೆ: ಸಚಿವ ಮುರುಗೇಶ್ ನಿರಾಣಿ, ರಾಜ್ಯದ ‘ಮುಖ್ಯಮಂತ್ರಿ’ ಅಗಲಿದ್ದಾರೆ. ಆದರೆ ನಾಳೆಯೇ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ ಅಂತ ಸಚಿವ ಕೆ.ಎಸ್.ಈಶ್ವರಪ್ಪ ಅವರು ಭವಿಷ್ಯ ನುಡಿದಿದ್ದಾರೆ.

ಬೀಳಗಿ ಪಟ್ಟಣದಲ್ಲಿ ಭಾನುವಾರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಡೆದ ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ನಮ್ಮ ನಾಯಕರಾದ ಮುರುಗೇಶ್ ನಿರಾಣಿ ಅವರು ರಾಜ್ಯದ ಮುಖ್ಯಮಂತ್ರಿ ಆಗುವುದು ನೂರಕ್ಕೆ ನೂರರಷ್ಟು ‌ಖಚಿತ. ಆದರೆ, ನಾಳೆಯೇ ಆಗುತ್ತಾರೆ ಎಂದು ನಾನು ಹೇಳುವುದಿಲ್ಲ ಎಂದರು.

ರಾಜ್ಯದ ಮುಖ್ಯಮಂತ್ರಿ ಆಗುವ ಅರ್ಹತೆ  ಮುರುಗೇಶ್ ನಿರಾಣಿಯವರಿಗೆ ಇದೆ. ಅವರಿಗೆ ರಾಜ್ಯವನ್ನು ಮುನ್ನಡೆಸುವ ಶಕ್ತಿ ಇದೆ. ಒಂದಲ್ಲೊಂದು ದಿನ ಆ ‘ಸ್ಥಾನಕ್ಕೆ ‘ ಬರಲಿದ್ದಾರೆ ಎಂದ ಈಶ್ವರಪ್ಪ, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ತೆಗೆದು ನಿರಾಣಿಯವರನ್ನು ಸಿಎಂ ಸ್ಥಾನದಲ್ಲಿ ಕೂರಿಸುತ್ತಾರೆಂದು ಯಾರೂ ತಪ್ಪಾಗಿ ಭಾವಿಸಬೇಡಿ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ‌ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡುವ ನಾಯಕ ಮುಖ್ಯಮಂತ್ರಿ ‌ಆಗಬೇಕು ಎಂಬುದು ಬಹುತೇಕರ ಆಶಯವಾಗಿದೆ. ನಿರಾಣಿ ಅವರು ಸಿಎಂ ಆದರೆ ಖಂಡಿತವಾಗಿ ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ಈಶ್ವರಪ್ಪ ವ್ಯಕ್ತಪಡಿಸಿದರು.

ನೀವು ಸಿಎಂ ಆದರೆ, ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡುತ್ತೀರಾ ಎಂದು ಈಶ್ಬರಪ್ಪ ಪ್ರಶ್ನಿಸಿದಾಗ, ವೇದಿಕೆಯಲ್ಲಿದ್ದ ಸಚಿವ ನಿರಾಣಿ ಅವರು ಖಂಡಿತವಾಗಿಯೂ ಮಾಡೇ ಮಾಡುತ್ತೇನೆ ಎಂದು ವಿಜಯದ ಸಂಕೇತವನ್ನು ತೋರಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತರು ನಿರಾಣಿ ಪರವಾಗಿ ಘೋಷಣೆ ಕೂಗಿದರು.

Share Post