CrimeDistricts

ಇಂದು ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ; ಒಡನಾಡಿಯಿಂದ ತಕರಾರು

ಚಿತ್ರದುರ್ಗ; ಇಬ್ಬರು ಮಠದ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಚಿತ್ರದುರ್ಗದ ಮುರುಘಾ ಶರಣರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ಇಂದು ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ನಲ್ಲಿ ನಡೆಯಲಿದೆ. ಜಾಮೀನು ಕೋರಿ ಮುರುಘಾ ಶರಣು ಆ. 29ರಂದು ಕೋರ್ಟ್‌ ಮೊರೆ ಹೋಗಿದ್ದರು. ಅವರಿಗೆ ಜಾಮೀನು ಸಿಕ್ಕರೆ ಬಂಧನದಿಂದ ತಪ್ಪಿಸಿಕೊಳ್ಳಬಹುದು. ಇಲ್ಲದಿದ್ದರೆ ಬಂಧನ ಭೀತಿ ಮತ್ತಷ್ಟು ಜಾಸ್ತಿಯಾಗಲಿದೆ.

ಜಿಲ್ಲಾ ಕೋರ್ಟ್‌ ನ್ಯಾಯಾಧೀಶರಾದ ಬಿ.ಕೆ. ಕೋಮಲಾ ಅವರು ರಜೆ ಮೇಲೆ ತೆರಳಿದ್ದ ಕಾರಣ ವಕೀಲರ ತಂಡ ಸಲ್ಲಿಸಿದ ಅರ್ಜಿಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕಲ್ಕಣಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದರು. ತಕರಾರು ಸಲ್ಲಿಕೆಗೆ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಲಾಗಿತ್ತು. ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆನ್ನಲಾದ ಬಾಲಕಿಯರ ಪರ ಕಾನೂನು ಹೋರಾಟ ಮಾಡಲು ಒಡನಾಡಿ ಸಂಸ್ಥೆಯು ನಿರ್ಧರಿಸಿದ್ದು, ಮುರುಘಾ ಶರಣರಿಗೆ ನಿರೀಕ್ಷಣಾ ಜಾಮೀನು ಕೊಡಬಾರದು ಎಂದು ಕೋರಿ, ಸಂಸ್ಥೆಯ ಪರವಾಗಿ ಹೈಕೋರ್ಟ್‌ ವಕೀಲ ಶ್ರೀನಿವಾಸ್‌ ಇಂದು ತಕರಾರು ಅರ್ಜಿ ಸಲ್ಲಿಸಲಿದ್ದಾರೆ.

ಪೋಕ್ಸೊ ಕಾಯ್ದೆಯ ಅನ್ವಯ, ಸರ್ಕಾರಿ ಅಭಿಯೋಜಕರಷ್ಟೇ ಅಲ್ಲದೆ, ಸಂತ್ರಸ್ತ ಬಾಲಕಿಯರು ಮತ್ತು ಪೋಷಕರು ಹಾಗೂ ಬಾಲಕಿಯರಿಗೆ ಯಾರ ಮೇಲೆ ವಿಶ್ವಾಸವಿದೆಯೋ ಅವರು ತಕರಾರು ಅರ್ಜಿ ಸಲ್ಲಿಸಲು ಅವಕಾಶವಿದೆ.

Share Post