CrimeDistricts

ಮುರುಘಾ ಶ್ರೀ ಮೂರು ದಿನ ಪೊಲೀಸ್‌ ಕಸ್ಟಡಿಗೆ; ಸೆಷನ್ಸ್‌ ಕೋರ್ಟ್‌ ಆದೇಶ

ಚಿತ್ರದುರ್ಗ; ಪೋಕ್ಸೋ ಕಾಯ್ದೆಯಡಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಮೂರು ದಿನ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ನಿನ್ನೆ ಬಂಧನವಾಗಿದ್ದ ಶ್ರೀಗಳನ್ನು ಇಂದು ಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ 2ನೇ ಹೆಚ್ಚುವರಿ ಸೆಷನ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಚಿತ್ರದುರ್ಗ ಪೊಲೀಸರು, ಶ್ರೀಗಳನ್ನು ಐದು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿರುವ ಕೋರ್ಟ್‌ ಶ್ರೀಗಳನ್ನು ಮೂರು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

ಮುರುಘಾ ಶ್ರೀಗಳನ್ನು ರಾತ್ರಿ ಬಂಧಿಸಿದ್ದ ಪೊಲೀಸರು ಮಧ್ಯರಾತ್ರಿಯಲ್ಲಿ ಜಡ್ಜ್‌ ಮುಂದೆ ಹಾಜರುಪಡಿಸಿದ್ದರು. ಆಗ ಜಡ್ಜ್‌ ಒಂದು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದ್ರೆ ಶ್ರೀಗಳನ್ನು ಜೈಲಿಗೆ ಕಳುಹಿಸಿದ ಕೆಲವೇ ಹೊತ್ತಿನಲ್ಲಿ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ತಜ್ಞರ ವೈದ್ಯರ ಸೂಚನೆಯಂತೆ ಬೆಂಗಳೂರಿಗೆ ಶಿಫ್ಟ್‌ ಮಾಡಲು ತಯಾರಿ ನಡೆದಿತ್ತು. ಈ ನಡುವೆ ನ್ಯಾಯಾಧೀಶರು ಕೋರ್ಟ್‌ ಅನುಮತಿ ಪಡೆಯದೇ ಹೇಗೆ ಆಸ್ಪತ್ರೆಗೆ ಕರೆದೊಯ್ದಿರಿ ಎಂದು ಜೈಲರ್‌ಗೆ ಪ್ರಶ್ನೆ ಮಾಡಿತ್ತು. ಜೊತೆಗೆ ಆರೋಪಿಯನ್ನು ಖುದ್ದಿ ಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚಿಸಿತ್ತು. ಹೀಗಾಗಿ ವಿಧಿಯಿಲ್ಲದೇ ಪೊಲೀಸರು ಆಸ್ಪತ್ರೆಯಲ್ಲಿದ್ದ ಶ್ರೀಗಳನ್ನು ಕೋರ್ಟ್‌ಗೆ ಹಾಜರುಪಡಿಸಿದ್ದರು.

Share Post