ಅಫ್ಗಾನ್ ಮಸೀದಿ ಹೊರಗೆ ಸ್ಫೋಟ; 14ಕ್ಕೂ ಹೆಚ್ಚು ಸಾವು
ಕಾಬೂಲ್; ಪಶ್ಚಿಮ ಅಫ್ಗಾನಿಸ್ತಾನದ ಹೆರಾತ್ ನಗರದ ಮಸೀದಿ ಹೊರಗೆ ಶುಕ್ರವಾರ ನಡೆದ ಸ್ಫೋಟದಲ್ಲಿ ತಾಲಿಬಾನ್ ಪರ ಉನ್ನತ ಮಟ್ಟದ ಧರ್ಮಗುರುಗಳು ಮತ್ತು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಮುಜೀಬ್ ರೆಹಮಾನ್ ಅನ್ಸಾರಿ ಮತ್ತು ಅವರ ಕೆಲ ಸಿಬ್ಬಂದಿ ಹಾಗೂ ನಾಗರಿಕರು ಮಸೀದಿಯ ಕಡೆಗೆ ಹೋಗುತ್ತಿದ್ದ ವೇಳೆ ಸಾವಿಗೀಡಾಗಿದ್ದಾರೆ. ಸ್ಫೋಟದಿಂದ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಪೊಲೀಸ್ ವಕ್ತಾರ ಮಹಮೂದ್ ರಸೋಲಿ ಹೇಳಿದ್ದಾರೆ.
ಹೆಸರು ಬಹಿರಂಗಪಡಿಸದ ಮೂಲಗಳ ಪ್ರಕಾರ 14 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜೂನ್ ಅಂತ್ಯದಲ್ಲಿ ಸಂಘಟನೆ ಆಯೋಜಿಸಿದ್ದ ವಿದ್ವಾಂಸರು ಮತ್ತು ಹಿರಿಯರ ಸಭೆಯಲ್ಲಿ ತಾಲಿಬಾನ್ ಪರವಾಗಿ ಮುಜಿಬ್ ರೆಹಮಾನ್ ಅನ್ಸಾರಿ ಮಾತನಾಡಿದ್ದರು. ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಭದ್ರತೆ ಸುಧಾರಿಸಿದೆ ಎಂದು ತಾಲಿಬಾನ್ ಹೇಳುತ್ತಿದೆ. ಆದರೆ, ಕೆಲ ತಿಂಗಳಿನಿಂದ ಹಲವು ಸ್ಫೋಟಗಳು ನಡೆದಿದ್ದು, ಪ್ರಾರ್ಥನೆ ಸಮಯದಲ್ಲಿ ಮಸೀದಿಗಳನ್ನು ಗುರಿಯಾಗಿಸಿಕೊಂಡಿವೆ. ಹೆಚ್ಚುತ್ತಿರುವ ದಾಳಿಗಳ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.