ಒಂದೇ ಹುಡುಗಿ ಮೇಲೆ ಅಣ್ಣ-ತಮ್ಮ ಕಣ್ಣು ; ತಮ್ಮ ಮರ್ಡರ್
ದಾವಣಗೆರೆ: ಅಕ್ಕ-ತಂಗಿಯ ಮಕ್ಕಳಿಬ್ಬರು ಒಂದು ಹುಡುಗಿಗಾಗಿ ಕಿತ್ತಾಟ ನಡೆಸಿದ್ದು, ಇದ್ರಲ್ಲಿ ಒಬ್ಬ ಹತನಾಗಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರದ ಕುಂದವಾಡದಲ್ಲಿ ನಡೆದಿದೆ. ಅಲ್ತಾಫ್ ಎಂಬಾತನೇ ಕೊಲೆಯಾಗಿರುವ ಯುವಕ. ಈತ ಜನವರಿ 19 ರಂದು ಕುಂದವಾಡ ಕೆರೆಯ ಬಳಿ ಶವವಾಗಿ ಪತ್ತೆಯಾಗಿದ್ದ. ಕೊಲೆ ಮಾಡಿ, ಶವವನ್ನು ಬಿಸಾಡಲಾಗಿತ್ತು. ಈ ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕೊಲೆಗಾರನನ್ನು ಬಂಧಿಸಿದ್ದಾರೆ. ಕೊಲೆಗಾರ ಬೇರೆ ಯಾರೂ ಅಲ್ಲ, ಅಲ್ತಾಫ್ ಸಹೋದರ ಇಬ್ರಾಹಿಂ ಎಂದು ತಿಳಿದುಬಂದಿದೆ.
ಅಂದಹಾಗೆ ಆರೋಪಿ ಇಬ್ರಾಹಿಂಗೆ ಇತ್ತೀಚೆಗಷ್ಟೆ ಮದುವೆ ನಿಶ್ಚಯವಾಗಿದ್ದು, ಮಾರ್ಚ್‌ನಲ್ಲಿ ಮದುವೆ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ ಅದೇ ಹುಡುಗಿ ಮೇಲೆ ಅಲ್ತಾಫ್ ಕಣ್ಣು ಹಾಕಿದ್ದನಂತೆ. ಇದನ್ನು ತಿಳಿದ ಅಣ್ಣ ಇಬ್ರಾಹಿಂ ಅಲ್ತಾಫ್‌ನನ್ನು ಕೊಲ್ಲಲು ಸ್ಕೆಚ್ ಹಾಕಿದ್ದಾನೆ. ಜನವರಿ 18 ರಂದು ಮದುವೆಗೆ ಬಟ್ಟೆ ಖರೀದಿ ಮಾಬೇಕೆಂದು ಅಲ್ತಾಫ್‌ನನ್ನು ಕರೆದುಕೊಂಡು ಹೋಗಿದ್ದಾರೆ. ನಂತರ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಕತ್ತು ಸೀಳಿ ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.
ಅಂದು ಸಂಜೆವರೆಗೂ ಫೋನ್ ಸಂಪರ್ಕದಲ್ಲಿದ್ದ ಇಬ್ಬರೂ, ರಾತ್ರಿವೇಳೆಗೆ ಇಬ್ಬರ ಫೋನ್ ಸ್ವಿಚ್ ಆಫ್ ಆಗಿತ್ತು. ಮಾರನೆಯ ದಿನ ಅಲ್ತಾಫ್ ಮೃತದೇಹ ಪತ್ತೆಯಾಗಿತ್ತು. ಆದ್ರೆ ಆರೋಪಿ ಇಬ್ರಾಹಿಂ ತಲೆಮರೆಸಿಕೊಂಡಿದ್ದ. ಈಗ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.