ಮಗಳು ಅನುಮಾನಾಸ್ಪದ ಸಾವು; 4 ದಿನ ಶವದ ಜೊತೆಗೇ ಕುಳಿತಿದ್ದ ತಾಯಿ..!
ಮಂಡ್ಯ; ಮಂಡ್ಯ ನಗರದಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಸ್ವಂತ ಮಗಳು ಸಾವನ್ನಪ್ಪಿದ್ದರೂ ಯಾರಿಗೂ ತಿಳಿಸದೇ ತಾಯಿ ನಾಲ್ಕು ದಿನಗಳ ಕಾಲ ಮಗಳ ಶವದ ಪಕ್ಕವೇ ಕುಳಿತಿದ್ದ ವಿಚಾರ ಬೆಳಕಿಗೆ ಬಂದಿದೆ. ಶವದ ಕೊಳೆತು ದುರ್ವಾಸನೆ ಬಂದಿದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯ ನಗರದ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯ ಮನೆಯೊಂದರಲ್ಲಿ 30 ವರ್ಷದ ರೂಪಾ ಎಂಬಾಕೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಆದ್ರೆ ಆಕೆ ತಾಯಿ ಸಾವಿನ ವಿಚಾರ ಯಾರಿಗೂ ತಿಳಿಸಿಲ್ಲ. ಬದಲಾಗಿ, ಮನೆಯ ಬಾಗಿಲು ಬಂದ್ ಮಾಡಿಕೊಂಡು, ನಾಲ್ಕು ದಿನಗಳಿಂದ ತಾಯಿ ನಾಗಮ್ಮ ಅವರು ಶವದ ಪಕ್ಕವೇ ಕುಳಿತಿದ್ದಾರೆ.
ಮೃತದೇಹ ಕೊಳೆತು ದುರ್ವಾಸನೆ ಬರಲು ಆರಂಭಿಸಿದೆ. ಇದರಿಂದ ಅನುಮಾನಗೊಂಡ ಅಕ್ಕಪಕ್ಕದ ಮನೆಯವರು, ಆ ಮನೆಯ ಬಾಗಿಲನ್ನು ಒಡೆಸಿದ್ದಾರೆ. ಈ ವೇಳೆ ರೂಪಾ ಮೃತಪಟ್ಟಿರುವುದು ಹಾಗೂ ಶವದ ಪಕ್ಕವೇ ರೂಪಾ ತಾಯಿ ನಾಗಮ್ಮ ಕೂತಿದ್ದ ದೃಶ್ಯ ಕಂಡುಬಂದಿದೆ. ಇದರಿಂದ ಆತಂಕಗೊಂಡ ಸ್ಥಳೀಯರು, ಮಂಡ್ಯ ಪೂರ್ವ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರ ಸಹಾಯದೊಂದಿಗೆ ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ.
ಮೃತ ರೂಪ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು. ಕೆಲ ತಿಂಗಳ ಹಿಂದೆ ಸಸ್ಪೆಂಡ್ ಆಗಿದ್ದರು. 10 ವರ್ಷಗಳ ಹಿಂದೆ ರೂಪಾಗೆ ವಿವಾಹವಾಗಿದ್ದು, ಗಂಡನೊಂದಿಗೆ ಜಗಳ ಮಾಡಿಕೊಂಡು ಐದು ವರ್ಷಗಳ ಹಿಂದೆಯೇ ತವರಿಗೆ ವಾಪಸ್ಸಾಗಿದ್ದಳು. ತಾಯಿಯ ಜೊತೆಯೇ ವಾಸವಿದ್ದ ರೂಪಾ, ಮದ್ಯ ಸೇವನೆ ಕಲಿತಿದ್ದಳು. ತಾಯಿ-ಮಗಳ ಇಬ್ಬರೂ ಕುಡಿದು ಜಗಳ ಮಾಡುತ್ತಿದ್ದರು ಎಂದು ಗೊತ್ತಾಗಿದೆ.