DistrictsPolitics

ನಿಗಮ ಮಂಡಳಿಗಳಲ್ಲಿ ಶಾಸಕರು, ಕಾರ್ಯಕರ್ತರಿಗೆ ಅವಕಾಶ; ಡಿಸಿಎಂ ಡಿ.ಕೆ.ಶಿವಕುಮಾರ್

ರಾಮನಗರ; ನಾನು ಮಾತ್ರ ಮಂತ್ರಿಯಾಗಿ, ಶಾಸಕರಿಗೆ ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ?. ಎಲ್ಲರಿಗೂ ಅವಕಾಶ ಸಿಕ್ಕೆ ಸಿಗುತ್ತದೆ. ನಿಗಮ ಮಂಡಳಿಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ  ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.  ಕನಕಪುರದಲ್ಲಿ ಮಾತನಾಡಿದ ಅವರು, ಎಲ್ಲಾ ಶಾಸಕರು ಕೇಳುತ್ತಿಲ್ಲ, 20- 25 ಜನರು ಕೇಳುತ್ತಿದ್ದಾರೆ. ಅದರಲ್ಲಿ 15 ಜನರಿಗೆ ಅವಕಾಶ ನೀಡುತ್ತೇವೆ. ಮಿಕ್ಕ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಿದ್ದು ಅವರಿಗೆ ಎರಡುವರೆ ವರ್ಷ ಅವಕಾಶ ನೀಡುತ್ತೇವೆ ಎಂದರು.

ನಮ್ಮ ಶಾಸಕರು ಹಾಗೂ ಕಾರ್ಯಕರ್ತರಿಗೆ ಅಧಿಕಾರ ಹಾಗೂ ಅವಕಾಶ ಕೊಡುತ್ತೇವೆ.  ಮಾಧ್ಯಮಗಳಿಗೆ ಅವಸರ ಏಕೆ?  ಎಂದು ಪ್ರಶ್ನೆ ಮಾಡಿದರು.  ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿ ಹೋರಾಟಗಾರರು ಸಿಎಂ ಭೇಟಿ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ರಾಮನಗರದ ಪಿಎಲ್ಡಿ ಕಟ್ಟಡವನ್ನು ಕೆಡವಿ ಜಿಲ್ಲಾ ಆಸ್ಪತ್ರೆ ಕಟ್ಟಿಸಿದಾಗ ದಳ- ಬಿಜೆಪಿಯವರು ಯಾರೂ ಬರಲಿಲ್ಲ ಏಕೆ? ಇಂತಹ ಧೈರ್ಯ ಮಾಡಿದ ಪರಿಣಾಮ ಅತ್ಯುತ್ತಮ ಜಿಲ್ಲಾ ಆಸ್ಪತ್ರೆ ರಾಮನಗರದಲ್ಲಿ ಆಗಿದೆ. ನನ್ನ ಮೊದಲ ಆದ್ಯತೆ ಕನಕಪುರಕ್ಕಲ್ಲ, ರಾಮಮನಗರಕ್ಕೆ ಎಂದರು.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಬಜೆಟ್ನಲ್ಲಿ ಕನಕಪುರಕ್ಕೆ ಮೆಡಿಕಲ್ ಕಾಲೇಜು ಎಂದು ಸೇರಿಸಿದ್ದರು. ಆನಂತರ ಯೋಜನೆ ಕಾರ್ಯಗತಗೊಂಡು, ಟೆಂಡರ್ ಆಗಿ ಭೂಮಿ ಪೂಜೆ ಒಂದು ಬಾಕಿ ಇತ್ತು. ರಾಮನಗರಕ್ಕೆ ಏನು ಬರಬೇಕೊ ಅದು ಬರಬೇಕು. ಕನಕಪುರಕ್ಕೆ ಏನು ಬರಬೇಕು ಅದೂ ಬರಬೇಕು. ರಾಮನಗರಕ್ಕೆ ಬರಬಾರದು ಎಂದು ಹೇಳಿದವರು ಯಾರು? ಈಗ ಪ್ರಸ್ಥಾವನೆಯಾಗಿರುವ ಕಾಲೇಜು ರಾಮನಗರದಿಂದ 3 ಕಿಲೋ ಮೀಟರ್ ದೂರದಲ್ಲಿದೆ ಮತ್ತು ರಾಮನಗರದಲ್ಲಿ ವಿಶ್ವವಿದ್ಯಾಲಯ ಇರಲಿದೆ. ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಇರಬೇಕು ಎನ್ನುವ ನಿಯಮವಿರುವ ಕಾರಣ ಅದನ್ನು ಕನಕಪುರದ ಬಳಿ ಮಾಡಲಾಗುತ್ತಿದೆ ಎಂದು ಹೇಳಿದರು.

ಕನಕಪುರದಲ್ಲಿ ತಾಯಿ- ಮಗು ಆಸ್ಪತ್ರೆ ಉದ್ಘಾಟನೆ ವೇಳೆ ನಾನು ಮಾತನಾಡಿರುವ ಮಾತುಗಳನ್ನು ಇನ್ನೊಮ್ಮೆ ಕೇಳಿ ಮತ್ತು ಕುಮಾರಸ್ವಾಮಿ ಅವರು ಬಜೆಟ್ ಭಾಷಣದ ವೇಳೆ ಮಾತನಾಡಿರುವ ಮಾತುಗಳು, ಸಿದ್ದರಾಮಯ್ಯ ಅವರು ಬಜೆಟ್ ಭಾಷಣದ ವೇಳೆಯ ಮಾತುಗಳನ್ನು ಕೇಳಿ ಯಾರು ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಸತ್ಯ ತಿಳಿಯುತ್ತದೆ ಎಂದು ಹೇಳಿದರು.

 

Share Post