ಶಾಸಕ ಮಾಡಾಳ್ ನಿವಾಸದ ಮೇಲೂ ದಾಳಿ; ಅರೆಸ್ಟ್ ಆಗ್ತಾರಾ ಚನ್ನಗಿರಿ ಶಾಸಕ..?
ಬೆಂಗಳೂರು; ಲಂಚ ಸ್ವೀಕಾರ ಪ್ರಕರಣ ಸಂಬಂಧ ಮಗನ ಬಂಧನವಾದ ಮೇಲೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ಆಪ್ತರ ಮೂಲಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕಳುಹಿಸಿದ್ದಾರೆ. ಈ ನಡುವೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ನಿವಾಸದ ಮೇಲೂ ಲೋಕಾಯುಕ್ತ ದಾಳಿಯಾಗಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಚನ್ನೇಶಪುರ ಶಾಸಕ ಮಾಡಾಳ್ ಅವರ ಹುಟ್ಟೂರು. ಹುಟ್ಟೂರಿನ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್‌ಪಿ ಕೌಲಾಪುರೆ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ಮಾಡಾಳ್ ಅವರ ಪುತ್ರ ಪ್ರಶಾಂತ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಟೆಂಡರ್ ಕೊಡಿಸುವ ಸಂಬಂಧ ನಲವತ್ತು ಲಕ್ಷ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಸಿಕ್ಕಿಬಿದ್ದಿದ್ದರು. ಅನಂತರ ಕಚೇರಿಯಲ್ಲಿ ಇನ್ನೂ ಎರಡು ಕೋಟಿ ಹಣ ಸಿಕ್ಕಿತ್ತು. ಅವರ ನಿವಾಸದಲ್ಲಿ ಆರು ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು.
ಈ ಪ್ರಕರಣದಿಂದಾಗಿ ಸರ್ಕಾರಕ್ಕೆ ಮುಜುಗರವಾಗಿದೆ. ಈ ಹಿನ್ನೆಲೆಯಲ್ಲಿ ಮಾಡಾಳ್ ಅವರ ರಾಜೀನಾಮೆ ಪಡೆದಿದೆ. ಇನ್ನು ಮಾಡಾಳ್ ಅವರಿಗೂ ಬಂಧನದ ಭೀತಿ ಎದುರಾಗಿದೆ. ಈ ಕಾರಣಕ್ಕಾಗಿ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.