ದಾವಣಗೆರೆಯ ಮನೆಯ ಬಳಿ ಮಾಡಾಳ್ ಪ್ರತ್ಯಕ್ಷ; ಅಭಿಮಾನಿಗಳಿಂದ ಮೆರವಣಿಗೆ
ದಾವಣಗೆರೆ; ಲಂಚ ಪ್ರಕರಣದಲ್ಲಿ ಪುತ್ರ ಪ್ರಶಾಂತ್ ಲೋಕಾಯುಕ್ತ ಬಲೆಗೆ ಬಿದ್ದ ಮೇಲೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದರು. ಕಳೆದ ಆರು ದಿನಗಳಿಂದ ಅವರು ಯಾರಿಗೂ ಕಾಣಿಸಿಕೊಂಡಿರಲಿಲ್ಲ. ಆದ್ರೆ ಅವರಿಗೆ ಇಂದು ಮಧ್ಯಂತರ ಜಾಮೀನು ಸಿಕ್ಕಿದೆ. ಜಾಮೀನು ಸಿಗುತ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ಕಾಣಿಸಿಕೊಂಡಿದ್ದಾರೆ. ದಾವಣಗೆರೆ ತಮ್ಮ ಮನೆಯ ಬಳಿ ಕಾಣಿಸಿಕೊಂಡಿದ್ದಾರೆ. ಅವರ ಸ್ವಗ್ರಾಮ ಚನ್ನೇಶಪುರದಲ್ಲಿ ಶಾಸಕರು ಬರುತ್ತಿದ್ದಂತೆ, ನೂರಾರು ಬೆಂಬಲಿಗರು ಅಲ್ಲಿ ಸೇರಿದ್ದರು. ಶಾಸಕರನ್ನು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಿ ಜೈಕಾರ ಕೂಗಿದರು.
ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರು ಎ1 ಆರೋಪಿಯಾಗಿದ್ದಾರೆ. ಹೀಗಾಗಿ ಅವರಿಗೆ ಬಂಧನದ ಭೀತಿ ಇತ್ತು. ಈ ಹಿನ್ನೆಲೆಯಲ್ಲಿ ಅವರು ಅಜ್ಞಾತ ಸ್ಥಳಕ್ಕೆ ಹೋಗಿದ್ದರು. ಅಜ್ಞಾತ ಸ್ಥಳದಲ್ಲಿದ್ದುಕೊಂಡು ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಇವರ ಮನವಿಯನ್ನು ಪುರಸ್ಕರಿಸಿ, ಮಧ್ಯಂತರ ಜಾಮೀನು ನೀಡಿದೆ. ಜಾಮೀನು ಸಿಗುತ್ತಿದ್ದಂತೆ ಮಾಡಾಳ್ ಅವರು ದಾವಣಗೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ವಗ್ರಾಮ ಚನ್ನೇಶಪುರದಲ್ಲಿ ಮಾತನಾಡಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಲೋಕಾಯುಕ್ತ ದಾಳಿ ವೇಳೆ ಸಿಕ್ಕಿರುವ ಹಣ ನಾವು ಸಂಪಾದನೆ ಮಾಡಿದ ಹಣ. ಅದಕ್ಕೆ ನಾವು ದಾಖಲೆಗಳನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ. ಕೆಎಸ್‌ಡಿಎಲ್ ಅಧ್ಯಕ್ಷನಾಗಿ ನಾನು ಯಾವುದೇ ಅಕ್ರಮವೆಸಗಿಲ್ಲ. ಈ ಪ್ರಕರಣದಲ್ಲಿ ನಿಸ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದೂ ವಿರೂಪಾಕ್ಷಪ್ಪ ಹೇಳಿದ್ದಾರೆ.