Districts

ಅಗತ್ಯವಿದ್ದರೆ ಮಾತ್ರ ಈಶ್ವರಪ್ಪರನ್ನು ಪೊಲೀಸರು ಬಂಧಿಸುತ್ತಾರೆ; ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಗುತ್ತಿಗೆದಾರ ಸಂತೋಷ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಅಗತ್ಯವಿದ್ದರೆ ಮಾತ್ರ ಈಶ್ವರಪ್ಪ ಅವರನ್ನು ಪೊಲೀಸರು ಬಂಧಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈಗಾಗಲೇ ಈಶ್ವರಪ್ಪ ಅವರೊಂದಿಗೆ ಮಾತನಾಡಿದ್ದೇನೆ. ತಾವು ನಿರಪರಾಧಿಯಾಗಿದ್ದು, ಆದಷ್ಟು ಬೇಗನೆ ತನಿಖೆ ಮಾಡಿದರೆ ಆರೋಪದಿಂದ ಮುಕ್ತನಾಗುತ್ತೇನೆ ಎಂದಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿದಾಗ ಸತ್ಯಾಂಶ ಹೊರಬರಲಿದೆ ಎಂದರು.

ಸಚಿವ ಈಶ್ವರಪ್ಪ ಅವರು ಪಕ್ಷಕ್ಕೆ ಮುಜುಗರ ಆಗದಿರಲೆಂದು ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರಿಗೆ ರಾಜೀನಾಮೆ ನೀಡಬೇಕೆಂದು ಯಾರೂ ಸೂಚಿಸಿಲ್ಲ. ಸ್ವಪ್ರೇರಣೆಯಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸಿಎಂ ಪುನರುಚ್ಚರಿಸಿದರು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದ ಜಾರ್ಜ್ ವಿರುದ್ಧವೂ ಪೊಲೀಸ್ ಅಧಿಕಾರಿ ಗಣಪತಿ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ರಾಜ್ಯದ ಪೊಲೀಸರಾಗಲಿ ಅಥವಾ ಸಿಬಿಐನವರಾಗಲಿ ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ತನಿಖೆ ಆಧರಿಸಿ, ಈಶ್ವರಪ್ಪ ಅವರನ್ನು ಬಂಧಿಸಬೇಕೇ ಬೇಡವೇ ಎಂಬುದನ್ನು ಪೊಲೀಸರು ನಿರ್ಧರಿಸಲಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್ ನವರು ತನಿಖಾಧಿಕಾರಿ ಆಥವಾ ಜಡ್ಜ್ ಆಗುವ ಅವಶ್ಯಕತೆ ಇಲ್ಲ. ತನಿಖೆಗೆ ಮುಕ್ತ ಅವಕಾಶ ನೀಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Share Post