Districts

ಬಾಗೇಪಲ್ಲಿ ಕ್ಷೇತ್ರದ ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ಇನ್ನಿಲ್ಲ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ಇಂದು ಮುಂಜಾನೆ ಹೃದಯಘಾತದಿಂದ ನಿಧನರಾಗಿದ್ದಾರೆ. ಮುಂಜಾನೆ 4.30ರ ಸುಮಾರು ಮನೆಯಲ್ಲಿ ಮಲಗಿದ್ದ ಶ್ರೀರಾಮರೆಡ್ಡಿಯವರಿಗೆ ತೀವ್ರ ಹೃದಯಾಘಾತವಾಗಿದೆ. ಆಗ ಕೂಡಲೇ ಅವರನ್ನು ಮನೆಗೆ ಹತ್ತಿರದಲ್ಲೇ ಇದ್ದ ಬಾಗೇಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಬೆಳಗ್ಗೆ 7.27ರ ವೇಳೆಗೆ ಶ್ರೀರಾಮರೆಡ್ಡಿ ಮೃತಪಟ್ಟಿರುವುದಾಗಿ ತಾಲೂಕು ವೈದ್ಯಧಿಕಾರಿಗಳು ಘೋಷಿಸಿದ್ದಾರೆ.

  ಭೂವ್ಯವಹಾರ, ಅನುಚಿತವ ವರ್ತನೆ, ಹಣಕಾಸು ದುರುಪಯೋಗ ಹೀಗೆ ಹಲವು ಆರೋಪಗಳನ್ನು ಹೊರಿಸಿ ಶ್ರೀರಾಮರೆಡ್ಡಿಯವರನ್ನು ಸಿಪಿಐಎಂ ಪಕ್ಷದಿಂದ 2018ರಲ್ಲಿ ಉಚ್ಛಾಟನೆ ಮಾಡಲಾಗಿತ್ತು. ಅನಂತರ ಅವರು  ಸಂಘರ್ಷ ಸಮಿತಿ ಪಕ್ಷ ಸ್ಥಾಪನೆ ಮಾಡಿದ್ದರು.

1999 ಮತ್ತು 2004ರಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಶ್ರೀರಾಮರೆಡ್ಡಿ ಸಿಎಂಐಎಂ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಿದ್ದರು. ರಾಜ್ಯ ಸಿಪಿಎಂ ಕಾರ್ಯದರ್ಶಿಯೂ ಆಗಿ ಶ್ರೀರಾಮರೆಡ್ಡಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ರೈತ ಮತ್ತು ಕಾರ್ಮಿಕ ಹೋರಾಟಗಳನ್ನು ಕಟ್ಟುವಲ್ಲಿ ಮಂಚೂಣಿಯಲ್ಲಿ ಇದ್ದರು. ಶ್ರೀರಾಮರೆಡ್ಡಿಯವರು ಶಾಸಕರಾಗಿದ್ದ ಸಮಯದಲ್ಲೇ ಬಾಗೇಪಲ್ಲಿಯಲ್ಲಿ ಹೆಚ್ಚು ಅಭಿವೃದ್ಧಿ ಕೆಲಸಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಸೇರಿದಂತೆ ರಾಜ್ಯಾದ್ಯಂತ ಅವರ ಅಭಿಮಾನಿ ಬಳಗವೇ ಇದೆ.

ಶ್ರೀರಾಮರೆಡ್ಡಿಯವರಿಗೆ 2021ರ ಮೇನಲ್ಲಿ ಕೋವಿಡ್ ಪಾಸಿಟಿವ್‌ ಆಗಿತ್ತು. ಈ ವೇಳೆ ತೀವ್ರ ಅನಾರೋಗ್ಯದಿಂದ ಬಳಲಿದ್ದರು. ಈ ವೇಳೆ ವೆಂಟಿಲೇಟರ್‌ ಸಿಗದೆ ಹಲವು ಆಸ್ಪತ್ರೆಗಳನ್ನು ಸುತ್ತಾಡಿದ್ದರು. ಅನಂತರ ಇತ್ತೀಚೆಗೆ ಅವರು ಎರಡೂ ಮೊಣಕಾಲುಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು.

Share Post