ಆದಿಯೋಗಿ ಪ್ರತಿಮೆ ಸ್ಥಾಪನೆಗೆ ಕೋರ್ಟ್ ಬ್ರೇಕ್; ಇಶಾ ಫೌಂಡೇಶನ್ ಕಾರ್ಯಕ್ರಮ ರದ್ದಾಗುತ್ತಾ..?
ಚಿಕ್ಕಬಳ್ಳಾಪುರ; ಕೊಯಮತ್ತೂರಿನಲ್ಲಿದ್ದಂತೆ ಚಿಕ್ಕಬಳ್ಳಾಪುರದ ಬಳಿ ಇಶಾ ಫೌಂಡೇಶನ್ ವತಿಯಿಂದ ಬೃಹತ್ ಆದಿಯೋಗಿ ಪ್ರತಿಮೆ ಸ್ಥಾಪಿಸಲಾಗಿದೆ. ಅದರ ಉದ್ಘಾಟನೆ ಕಾರ್ಯಕ್ರಮವನ್ನು ಇದೇ ಜನವರಿ 15ರಂದು ಆಯೋಜಿಸಲಾಗಿತ್ತು. ಇದಕ್ಕೆ ಉಪರಾಷ್ಟ್ರಪತಿ ಆಗಮಿಸಬೇಕಾಗಿತ್ತು. ಆದ್ರೆ ಹೈಕೋರ್ಟ್ ಪ್ರತಿಮೆ ಲೋಕಾರ್ಪಣೆಗೆ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ರಾಜ್ಯ ಸರ್ಕಾರ ಹಾಗೂ ಇಶಾ ಫೌಂಡೇಶನ್‌ಗೆ ಹಿನ್ನಡೆಯಾದಂತಾಗಿದೆ.
ಪ್ರತಿಮೆ ಸ್ಥಾಪನೆ ಮಾಡಿರುವ ಸ್ಥಳ ಪರಿಸರ ಸೂಕ್ಷ್ಮ ವಲಯವಾಗಿದೆ. ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ಹೊರಡಿಸಿದೆ. ಇಶಾ ಫೌಂಡೇಶನ್‌ಗೆ ಸರ್ಕಾರ ಕಾನೂನು ಬಾಹಿರವಾಗಿ ಭೂಮಿ ನೀಡಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್, ಇಶಾ ಫೌಂಡೇಶನ್, ಸರ್ಕಾರ ಹಾಗೂ ಇತರ 16 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಜನವರಿ 15 ಆಧಿಯೋಗಿ ಮೂರ್ತಿ ಸ್ಥಾಪನೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದ್ರೆ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯ ಪೀಠ ಈ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಉದ್ಘಾಟನೆಗೆ ಉಪರಾಷ್ಟ್ರಪತಿ ಬರುವುದು ಅನುಮಾನವಾಗಿದೆ.
ಜನವರಿ 15ರಂದು ಸಂಜೆ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ|| ಕೆ. ಸುಧಾಕರ್ ಸೇರಿ ಹಲವು ಗಣ್ಯರು ಪಾಲ್ಗೊಳ್ಳಬೇಕಿತ್ತು. ಆದ್ರೆ ಕೋರ್ಟ್ ಆದೇಶದಿಂದ ಕಾರ್ಯಕ್ರಮ ನಡೆಯುವುದು ಅನುಮಾನವಾಗಿದೆ.