ಮೈಸೂರಿನಲ್ಲಿ ರಂಗೇರಿದ ಜೆಡಿಎಸ್ ರಾಜಕೀಯ; ಹಲವು ಅಭ್ಯರ್ಥಿಗಳು ಫೈನಲ್
ಮೈಸೂರು; ನಿನ್ನೆ ಜಿ.ಟಿ.ದೇವೇಗೌಡರು ಜೆಡಿಎಸ್‌ನಲ್ಲಿ ಇರುತ್ತೇನೆ ಎಂದು ಹೇಳಿದ್ದೇ ತಡ ಮೈಸೂರು ಜೆಡಿಎಸ್‌ಮಲ್ಲಿ ಚೈತನ್ಯ ಮೂಡಿದೆ. ಹೆಚ್.ಡಿ.ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರು ಕೂಡಾ ತುಂಬಾ ಆಸಕ್ತಿ ವಹಿಸಿ ಮೈಸೂರಿನಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಇನ್ನು ನವೆಂಬರ್ 1 ರಂದು ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡೋದಾಗಿ ಹೇಳಲಾಗಿತ್ತು. ಆದ್ರೆ ಅದಕ್ಕಿಂತ ಮೊದಲೇ ಮೈಸೂರು ಜಿಲ್ಲೆಯ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜಿ.ಟಿ.ದೇವೇಗೌಡ, ಹುಣಸೂರು ಕ್ಷೇತ್ರಕ್ಕೆ ಜಿಟಿಡಿ ಪುತ್ರ ಹರೀಶ್ ಗೌಡ, ಕೆ.ಆರ್.ಮಗರ ಕ್ಷೇತ್ರಕ್ಕೆ ಸಾ.ರಾ.ಮಹೇಶ್, ಪಿರಿಯಾಪಟ್ಟಣಕ್ಕೆ ಕೆ.ಮಹದೇವ್, ಟಿ.ನರಸೀಪುರಕ್ಕೆ ಅಶ್ವಿನ್ ಹಾಗೂ ಎಚ್.ಡಿ.ಕೋಟೆಗೆ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ಗೆ ಟಿಕೆಟ್ ಕಾಯಂ ಮಾಡಲಾಗಿದೆ.
ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಜೆಡಿಎಸ್ ನಾಯಕರು ವಿಶೇಷ ಪೂಜೆ ಸಲ್ಲಿಸಿದರು. ಅನಂತರ ಮೈಸೂರು ಜಿಲ್ಲೆ ಕ್ಷೇತ್ರಗಳಿಗೆ ಟಿಕೆಟ್ ಖಾಯಂ ಮಾಡಿದರು. ಇದೇ ವೇಳೆ ಮಾತನಾಡಿರುವ ಜಿ.ಟಿ.ದೇವೇಗೌಡರು, ನಿನ್ನೆಯಿಂದಲೇ ನಾನು ಪಕ್ಷ ಸಂಘಟನೆಗೆ ಬಂದಿದ್ದೇನೆ. 3 ವರ್ಷದ ನಂತರ ನನ್ನ ಮನಸ್ಸು ತುಂಬಾ ಸಮಾಧಾನದಲ್ಲಿದೆ. ನನ್ನ ಮನೆಯವರು ಕೂಡಾ ಇದರಿಂದ ಹೆಚ್ಚು ಖುಷಿಯಲ್ಲಿದ್ದಾರೆ ಎಂದು ಹೇಳಿದರು.
ಇನ್ನು ಹೆಚ್.ಡಿ.ದೇವೇಗೌಡರು ಕೂಡಾ ಜಿಟಿಡಿ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಮೈಸೂರು ಜಿಲ್ಲೆಯ ಉಸ್ತುವಾರಿಯನ್ನು ಜಿ.ಟಿ.ದೇವೇಗೌಡರಿಗೆ ಕೊಟ್ಟಿದ್ದೇವೆ. ಮೈಸೂರು ಜಿಲ್ಲೆಯಲ್ಲಿ ಜಿಟಿಡಿ ನಾಯಕತ್ವದಲ್ಲೇ ಎಲ್ಲವೂ ನಡೆಯುತ್ತವೆ. ಮೈಸೂರು ಜೆಡಿಎಸ್ ರಾಜಕಾರಣದಲ್ಲಿ ಜಿ.ಟಿ.ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನಗಳೇ ಅಂತಿಮ ಎಂದು ಹೇಳಿದ್ದಾರೆ. ಜಿ.ಟಿ.ಡಿ. ಬಗ್ಗೆ ಯಾರೇ ಕೊಂಕು ಮಾತನಾಡಿದರೂ ಸಹಿಸುವುದಿಲ್ಲ ಎಂದು ಇದೇ ವೇಳೆ ದೊಡ್ಡಗೌಡರು ಎಚ್ಚರಿಕೆ ನೀಡಿದ್ದಾರೆ.