Districts

ಪಡುವಾರಹಳ್ಳಿ ದೇವು ಕೊಲೆ ಪ್ರಕರಣ; ಅವ್ವಾ ಮಾದೇಶ್‌ ಖುಲಾಸೆ

ಮೈಸೂರು: 2016ರಲ್ಲಿ ಮೈಸೂರು ಜನರನ್ನು ಬೆಚ್ಚಿಬೀಳಿಸಿದ್ದ ಪಡುವಾರಹಳ್ಳಿಯ ದೇವು ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಮೈಸೂರು ಜಿಲ್ಲಾ ನ್ಯಾಯಾಲಯ ಇಂದು ಈ ಪ್ರಕರಣದ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ನಗರ ಪಾಲಿಕೆ ಮಾಜಿ ಸದಸ್ಯ ಮಹದೇಶ್‌ ಅಲಿಯಾಸ್‌ ಅವ್ವ ಮಾದೇಶ್‌ ನಿರ್ದೋಷಿ ಎಂದು ಕೋರ್ಟ್‌ ತೀರ್ಪು ನೀಡಿದೆ.

ಪ್ರಕರಣದ ಆರೋಪಿಗಳಲ್ಲಿ 11 ಮಂದಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ನಗರಪಾಲಿಕ ಮಾಜಿ ಸದಸ್ಯ ಮಹದೇಶ್ ಸೇರಿದಂತೆ 18 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ. 11 ಮಂದಿಯ ಶಿಕ್ಷೆಯ ಪ್ರಮಾಣ ನಾಳೆ ಪ್ರಕಟವಾಗಲಿದೆ. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನಗರದ ಪಡುವಾರಹಳ್ಳಿ ನಿವಾಸಿ ನಾರಾಯಣ ಎಂಬವರ ಮಗ ಹಾಗೂ ರೌಡಿ ಶೀಟರ್ ದೇವೇಂದ್ರ ಅಲಿಯಾಸ್ ದೇವು(35) ಎಂಬವನನ್ನು 2016 ಮೇ.5 ರಂದು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿತ್ತು.

ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಜಯಲಕ್ಷ್ಮೀಪುರಂ ಪೊಲೀಸರು ಕೋಕಾ ಕಾಯ್ದೆಯಡಿ 29 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 6 ವರ್ಷಗಳ ವಿಚಾರಣೆ ನಂತರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪವನಕುಮಾರ್ ಅಲಿಯಾಸ್ ಪವನ್, ಸುನಿಲ್‌ಕುಮಾರ್ ಅಲಿಯಾಸ್ ರಘು, ಸಿ.ರಾಕೇಶ್ ಅಲಿಯಾಸ್ ರಾಖಿ, ಎಚ್.ಬಿ.ಕಾರ್ತಿಕ್, ಮಂಜು ಅಲಿಯಾಸ್ ಫಯಾಜ್, ನಾಗೇಂದ್ರ ಅಲಿಯಾಸ್ ವಡ್ಡನಾಗ, ಕೆ.ಎಲ್.ಸುನಿಲ್, ವಿಜಯಕುಮಾರ್ ಅಲಿಯಾಸ್ ವಿಜಿ, ಮಣಿಕಂಠ ಅಲಿಯಾಸ್ ಬೋರ, ಕೆ.ಎಂ.ರಘು, ಎನ್.ನವೀನ್ ಅಲಿಯಾಸ್ ಆರ್‌ಎಕ್ಸ್ ನವೀನ್ ಎಂಬವರು ಶಿಕ್ಷೆಗೊಳಗಾಗಿದ್ದಾರೆ.

ಉಳಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ ಶಿವರಾಜ್, ಪದ್ಮನಾಭ, ಪಿ.ಕಾರ್ತಿಕ್, ಬಿ.ಗುರುದತ್, ಎಂ.ಸಂತೋಷ್, ಟಿ.ಪರಮೇಶ್, ಶಶಿಕುಮಾರ್, ಆರ್.ಪ್ರಮೋದ್, ಎಚ್.ಕೆ.ನವೀನ್‌ಕುಮಾರ್, ಸಿ.ಎಸ್.ಶ್ರೀಧರ್, ಸಿ.ಮಂಜು, ಚಂದು, ಮಹದೇವ, ರಾಮು, ಮಹದೇಶ್ ಅಲಿಯಾಸ್ ಅವ್ವಾ ಮಾದೇಶ್, ಶಿವಕುಮಾರ್, ಇಲಯಾ ಪೀರ್‌ಸಾಬ್, ನಂದಕುಮಾರ್ ಅವರುಗಳನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ.
ಪ್ರಕರಣದ ವಿಚಾರಣೆಯನ್ನು ನಗರದ ಪ್ರಧಾನ ಜಿಲ್ಲಾ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಲ್.ರಘುನಾಥ್ ನಡೆಸಿದ್ದರು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಸುದೀಪ್ ಬಂಗೇರ ವಾದ ಮಂಡಿಸಿದ್ದರು. ಅಪರಾಧಿಗಳ ಶಿಕ್ಷೆಯ ಪ್ರಮಾಣ ಶುಕ್ರವಾರ ಪ್ರಕಟವಾಗಲಿದೆ.

ಘಟನೆ ವಿವರ: ಕೊಲೆ ನಡೆದ ದಿನ ದೇವು ಅವರು ತಮ್ಮ ಸ್ನೇಹಿತರಾದ ಅಶೋಕ್, ರಮೇಶ್ ಹಾಗೂ ಶ್ರೀಕಾಂತ್ ಅವರ ಜೊತೆ ತಮ್ಮ ಮನೆಯ ಮುಂದಿನ ರಸ್ತೆಯಲ್ಲಿದ್ದ ಮಾರಿಗುಡಿ ದೇವಸ್ಥಾನದ ಬಳಿ ಕುಳಿತಿದ್ದರು. ಇದೇ ವೇಳೆ ಬೊಲೆರೋ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬಂದ ಸುಮಾರು 10 ರಿಂದ 11 ಮಂದಿ ಕೈಯಲ್ಲಿ ಲಾಂಗ್ ಹಿಡಿದು ಧಡದಡನೆ ಇಳಿದಿದ್ದಾರೆ. ಲಾಂಗ್ ಸಮೇತ ಇಳಿದ ಅಪರಿಚಿತರನ್ನು ಕಂಡ ದೇವು ಹಾಗೂ ಸ್ನೇಹಿತರು ಒಬ್ಬೊಬ್ಬರು ಒಂದೊಂದು ರಸ್ತೆಯಲ್ಲಿ ಓಡಿದ್ದಾರೆ. ಇದೇ ವೇಳೆ ವಾಹನಗಳಲ್ಲಿ ಬಂದಿದ್ದ ಯುವಕರು ದೇವುನನ್ನು ಅಟ್ಟಿಸಿಕೊಂಡು ಬಂದಿದ್ದಾರೆ. ಧೃಢಕಾಯವಾದ ಕಾರಣ ದೇವುಗೆ ಹೆಚ್ಚಿಗೆ ಓಡಲಾಗಲಿಲ್ಲ. ಆದರೂ ಶಕ್ತಿ ಮೀರಿ ಓಡುತ್ತಿದ್ದ ವೇಳೆ ಮಾರಿಗುಡಿ ದೇವಸ್ಥಾನದ ಬಳಿ ಎಡವಿ ಬಿದ್ದಿದ್ದರು. ದೇವುನನ್ನು ಸುತ್ತುವರಿದ ಅಪರಿಚಿತ ಯುವಕರು ಮೊದಲಿಗೆ ಆತನ ಮುಂಗಾಲಿಗೆ ಲಾಂಗ್‌ನಿಂದ ಹಲ್ಲೆ ನಡೆಸಿದ್ದಾರೆ. ನಂತರ ಅಷ್ಟೂ ಜನ ಸೇರಿ ತಮ್ಮ ಕೈಯಲ್ಲಿದ್ದ ಲಾಂಗ್‌ಗಳಿಂದ ದೇವು ಅವರ ತಲೆ, ಕತ್ತು, ಭಾಗಗಳಿಗೆ ಮನಸೋ ಇಚ್ಛೆ ಇರಿದು ತಕ್ಷಣವೇ ಅಲ್ಲಿಂದ ತಮ್ಮ ವಾಹನಗಳಲ್ಲಿ ಪರಾರಿಯಾಗಿದ್ದರು.
ತಕ್ಷಣವೇ ಸ್ಥಳಕ್ಕಾಗಮಿಸಿದ್ದ ಇನ್ಸ್‌ಪೆಕ್ಟರ್ ತಿಮ್ಮೇಗೌಡ ಹಾಗೂ ಸಿಬ್ಬಂದಿ ಘಟನಾ ಸ್ಥಳದ ಮಹಜರು ನಡೆಸಿದ್ದರು. ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ಅಂದಿನ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಉಪ ಪೊಲೀಸ್ ಆಯುಕ್ತ ಶೇಖರ್, ಡಿ.ಎನ್.ಬಿರ್ಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Share Post