ಕಮಲ ಕೆರೆಯಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿದ್ದರೆ ಚೆನ್ನ; ಡಿ.ಕೆ.ಶಿವಕುಮಾರ್
ಶಿವಮೊಗ್ಗ; ಕಮಲ ಕೆರೆಯಲ್ಲಿದ್ದರೆ ಚೆನ್ನ, ತೆನೆ ಹೊಲದಲ್ಲಿದ್ದರೆ ಚೆನ್ನ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಅದಕ್ಕಾಗಿ ರಾಜ್ಯದಲ್ಲಿ ಬದಲಾವಣೆ ಮಾಡಬೇಕು ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದ ಜನಧ್ವನಿ ಯಾತ್ರೆಯಲ್ಲಿ ಅವರು ಮಾತನಾಡಿದರು.
ನಿಮ್ಮ ಹೃದಯದಲ್ಲಿ ಜಾತ್ಯತೀತ ತತ್ವವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ನಿಮಗೆ ಗೊತ್ತಿದೆ. ಕುಮಾರಣ್ಣ ಏನಾದರೂ ಹೇಳಲಿ. ನೀವು ಕಾಂಗ್ರೆಸ್ ಪಕ್ಷ ಬೆಂಬಲಿಸಿದರೆ ರಾಜ್ಯ, ಎಲ್ಲ ಸಮಾಜದವರು ಉಳಿಯುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಹೇಳಿದರು.
ವಿಎಸ್ಐಎಲ್ ವಿಚಾರದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಸಂಗಮೇಶ್ ಸೋತಿದ್ದರೂ ಈ ಕಾರ್ಖಾನೆಗೆ ಜೀವ ತುಂಬಲು ಸಿದ್ದರಾಮಯ್ಯನವರ ಬಳಿ ಕಾಡಿ ಬೇಡಿ, ಗಣಿ ಭೂಮಿ ಮಂಜೂರು ಮಾಡಿದ್ದರು. ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲು ಆಗಲಿಲ್ಲ. ಕೇಂದ್ರ ಮಂತ್ರಿ ಬಂದು 6 ಸಾವಿರ ಕೋಟಿ ಕೊಡಿಸುವುದಾಗಿ ಹೇಳಿಸಿದ್ದರು. ಇದು ಸುಳ್ಳಿನ ಭರವಸೆ. ಸುಳ್ಳಿನ ಕಾರ್ಖಾನೆಯ ಮತ್ತೊಂದು ಹೆಸರು ಬಿಜೆಪಿ. ಅವರಿಗೆ ನುಡಿದಂತೆ ನಡೆಯಲು ಆಗಿಲ್ಲ. 50 ದಿನಗಳ ನಂತರ ಈ ಜನ ಬಿಜೆಪಿಯನ್ನು ಗಂಟು ಮೂಟೆ ಕಟ್ಟಿಸಿ ಮನೆಗೆ ಕಳುಹಿಸಿದರೆ, ಕಾಂಗ್ರೆಸ್ ನಾಯಕರನ್ನು ವಿಧಾನಸೌಧಕ್ಕೆ ಕಳುಹಿಸಲಿದ್ದಾರೆ.
ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲು ಈ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದೇವೆ. ಬೆಳಗಾವಿಯಿಂದ ಆರಂಭಿಸಿ ರಾಜ್ಯದುದ್ದಗಲ ನಾವು ಪ್ರವಾಸ ಮಾಡಿದ್ದೇವೆ. ನಾವು ಇಲ್ಲಿ ನಿಮ್ಮ ಜೈಕಾರ, ಹೂವಿನ ಹಾರಕ್ಕೆ ನಾನಿಲ್ಲಿಗೆ ಬಂದಿಲ್ಲ. ಭದ್ರಾವತಿಯ ಜನರ ಜತೆ ನಾವಿದ್ದೇವೆ. ಅವರ ಕೈ ಬಲಪಡಿಸುತ್ತೇವೆ ಎಂದು ಹೇಳಲು ಬಂದಿದ್ದೇವೆ. ನಮಗೆ ನಿಮ್ಮ ಕಷ್ಟ ಅರ್ಥವಾಗುತ್ತದೆ. ಬಿಜೆಪಿಯವರು ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಅವರಿಂದ ಮಾಡಲು ಆಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಸರ್ಕಾರದ ಎಲ್ಲ ಇಲಾಖೆ ನೇಮಕಾತಿಯಲ್ಲಿ ಅಕ್ರಮ ಮಾಡುತ್ತಿದ್ದಾರೆ.