ಗುಹೆಗೆ ನುಗ್ಗಿದ ಬೇಟೆಗಾರರು; ಅಲ್ಲಿ ನಡೆದಿದ್ದೇನು..?
ಚಿಕ್ಕಮಗಳೂರು; ಕಾಡುಪ್ರಾಣಿಗಳನ್ನು ಬೇಟೆಯಾಡೋದು ಕಾನೂನು ಪ್ರಕಾರ ಅಪರಾಧ. ಸಿಕ್ಕಿಬಿದ್ದರೆ ಜೈಲು ಶಿಕ್ಷೆ ಆಗುತ್ತದೆ. ಇದು ಗೊತ್ತಿದ್ದರೂ ಹಳ್ಳಿ ಪ್ರದೇಶದಲ್ಲಿ ಇನ್ನೂ ಕಾಡುಪ್ರಾಣಿಗಳ ಭೇಟೆ ನಡೆಯುತ್ತಲೇ ಇದೆ. ಅದೇ ರೀತಿ ಚಿಕ್ಕಮಗಳೂರು ಬಳಿ ಕಾಡುಪ್ರಾಣಿಗಳ ಬೇಟೆಗೆಂದು ಹೋಗಿದ್ದ ಇಬ್ಬರು ಕಾಫಿ ತೋಟದ ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದ ಬಳಿಯ ಗುಹೆಯಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪಿದವರನ್ನು ಗೋವಿಂದರಾಜು (30) ಹಾಗೂ ವಿಜಯ್ ಕುಮಾರ್ (29) ಎಂದು ಗುರುತಿಸಲಾಗಿದ್ದು, ಇಬ್ಬರೂ ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ. ಆನೆಗುಂಡಿ ಎಸ್ಟೇಟ್ ಸಮೀಪವಿರುವ ಬೆಟ್ಟವೊಂದರ ಗುಹೆಯಲ್ಲಿ ಮುಳ್ಳುಹಂದಿಗಳು ಇರುವ ಬಗ್ಗೆ ಕಾರ್ಮಿಕರಿಗೆ ಮಾಹಿತಿ ಸಿಕ್ಕಿದೆ. ರಾತ್ರಿ ವೇಳೆ ಅವುಗಳನ್ನು ಬೇಟೆಯಾಡಲು ಹೋಗಿದ್ದಾರೆ.
ನಾಲ್ವರು ಕಾರ್ಮಿಕರು ಬೇಟೆಗೆ ಹೋಗಿದ್ದು, ಅದ್ರಲ್ಲಿ ಇಬ್ಬರು ಕಾರ್ಮಿಕರು ಗುಹೆ ಪ್ರವೇಶಿಸಿದ್ದಾರೆ. ಗುಹೆಯಲ್ಲಿ ಆಮ್ಲಜನಕವಿಲ್ಲದ್ದರಿಂದ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.