Districts

ಹೊನ್ನಾಳಿಗೆ ಸಿಎಂ ಬೊಮ್ಮಾಯಿ ಭೇಟಿ; ಚಂದ್ರು ಕುಟುಂಬಕ್ಕೆ ಸಾಂತ್ವನ

ದಾವಣಗೆರೆ; ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್‌ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸಬೇಕು. ಎಲ್ಲ ರೀತಿಯ ತನಿಖೆ ನಂತರವೇ ತೀರ್ಮಾನಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇಂದು ಹೊನ್ನಾಳಿಗೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ, ಶಾಸಕ ರೇಣುಕಾಚಾರ್ಯ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅನಂತರ ಮಾತನಾಡಿದ ಅವರು, ಚಂದ್ರು ಸಾವಿನ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸಿ ತೀರ್ಮಾನಕ್ಕೆ ಬರಬೇಕು ಎಂದು ಹೇಳಿದ್ದಾರೆ.

ಚಂದ್ರ ಅವರ ಮರಣೋತ್ತರ ಪರೀಕ್ಷೆ ವರದಿ ಇನ್ನೆರಡು ದಿನಗಳಲ್ಲಿ ಬರಲಿದೆ. ಈ ವರದಿ ಹಾಗೂ ವಿಧಿ ವಿಜ್ಞಾನ ಅಧಿಕಾರಿಗಳು ನೀಡಿದ ವರದಿಯ ಆಧಾರದಲ್ಲಿ ತನಿಖೆ ನಡೆಸಲಾಗುತ್ತದೆ. ಇದರ ಜೊತೆಗೆ ಪ್ರಕರಣದ ಮರುಸೃಷ್ಟಿಯ ತನಿಖೆ ಆಗಬೇಕಿದೆ. ಈ ಎಲ್ಲಾ ರೀತಿಯ ತನಿಖೆಗಳ ನಂತರ ಪ್ರಕರಣ ಹೇಗೆ ನಡೆಯಿತು ಎಂಬುದು ಗೊತ್ತಾಗಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ನಾನು ಸಿಎಂ ಆಗಿ ಇಲ್ಲಿಗೆ ಬಂದಿಲ್ಲ ಎಂದ ಬೊಮ್ಮಾಯಿ, ರೇಣುಕಾಚಾರ್ಯ ನನಗೆ ಸಹೋದರ ಇದ್ದಂತೆ. ಹೀಗಾಗಿ ಅವರಿಗಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಸಚಿವರಾದ ಭೈರತಿ ಬಸವರಾಜ, ಗೋವಿಂದ ಕಾರಜೋಳ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಇದ್ದರು.

Share Post