ಮೋದಿ ಕಾರ್ಯಕ್ರಮಕ್ಕೆ ಕಾಲೇಜು ಮಕ್ಕಳು; ಸರ್ಕಾರದ ವಿರುದ್ಧ ಹರಿಹಾಯ್ದ ಡಿಕೆಶಿ
ಬೆಂಗಳೂರು; ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಲೇಜು ಮಕ್ಕಳನ್ನು ಕರೆತರಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದು ನಾಚಿಗೇಡಿನ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಶಾಲೆ ಅಥವಾ ಕಾಲೇಜಿನ ಕಾರ್ಯಕ್ರಮವಾದರೆ ಮಕ್ಕಳನ್ನು ಕರೆತರಬಹುದಿತ್ತು. ಆದ್ರೆ ಇದು ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮವಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಸರ್ಕಾರ ಒಂದು ಸುತ್ತೋಲೆ ಹೊರಡಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಕಾಲೇಜು ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆತರುವಂತೆ ಸೂಚನೆ ನೀಡಲಾಗಿದೆ. ಕರೆತರದೇ ಇದ್ದಲ್ಲಿ ಮುಂದಿನ ಆಗುಹೋಗುಗಗಳೇ ಪ್ರಾಂಶುಪಾಲರೇ ಜವಾಬ್ದಾರರಾಗುತ್ತಾರೆ ಎಂದು ಹೇಳಲಾಗಿದೆ. ಬಿಜೆಪಿಯವರಿಗೆ ಮಕ್ಕಳನ್ನು ಕರೆತಂದು ಕಾರ್ಯಕ್ರಮ ಮಾಡುವ ಗತಿ ಬಂತಾ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.
ನೀವು ಮೂರು ವರ್ಷದಿಂದ ಅಧಿಕಾರ ಮಾಡಿದ್ದೀರಿ. ಡಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಿದ್ದೀರಿ. ನಿಮ್ಮ ಸರ್ಕಾರದ ಸಾಧನೆಗಳನ್ನು ತೋರಿಸಿ ಜನರನ್ನು ಕರೆದುಕೊಂಡು ಬಂದು ಪ್ರಧಾನಿಗಳ ಕಾರ್ಯಕ್ರಮ ಮಾಡಿ. ಶಾಲಾ ಮಕ್ಕಳನ್ನು ಯಾಕೆ ಕರೆತರಬೇಕು ಎಂದು ಪ್ರಶ್ನೆ ಮಾಡಿರುವ ಡಿಕೆಶಿ, ಇದು ದೇಶಕ್ಕೇ ಅವಮಾನ, ಪ್ರಧಾನ ಮಂತ್ರಿ ಸ್ಥಾನಕ್ಕೂ ದೊಡ್ಡ ಅವಮಾನ ಎಂದರು. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದೂ ಆಗ್ರಹಿಸಿದರು.