ಬೆಳಗಿನಜಾವ ಮನೆಗೆ ಆಕಸ್ಮಿಕ ಬೆಂಕಿ; ಸಜೀವದಹನವಾದ ನಾಲ್ವರು
ವಿಜಯನಗರ: ಮನೆಗೆ ಬೆಂಕಿ ತಗುಲಿ ಮನೆಯಲ್ಲಿದ್ದ ನಾಲ್ವರು ಸಜೀವ ದಹನವಾಗಿರುವ ಘಟನೆ ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ.
ಮರಿಯಮ್ಮನಹಳ್ಳಿ 5ನೇ ವಾರ್ಡಿನ ರಾಘವೇಂದ್ರ ಶೆಟ್ಟಿ ಅವರ ಮನೆಯಲ್ಲಿ ಇಂದು ಬೆಳಗಿನಜಾವ ಈ ದುರಂತ ನಡೆದಿದೆ. ಮನೆಯಲ್ಲಿ ಎಲ್ಲರೂ ಮಲಗಿದ್ದಾಗ, ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಬೆಂಕಿಯ ಶಾಖಕ್ಕೆ ರಾಘವೇಂದ್ರ ಶೆಟ್ಟಿ ಮತ್ತು ಅವರ ಪತ್ನಿ ರಾಜೇಶ್ವರಿ ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಗಂಡ-ಹೆಂಡತಿ ಹೊರ ಬರುತ್ತಿದ್ದಂತೆ ಬೆಂಕಿ ಸಂಪೂರ್ಣ ಮನೆಗೆ ಆವರಿಸಿಕೊಂಡಿದೆ. ಮೇಲ್ಮನೆಯ ಬೆಡ್ ರೂಂನಲ್ಲಿ ಮಲಗಿದ್ದ ನಾಲ್ವರನ್ನು ಕಾಪಾಡಲು ಎಷ್ಟೇ ಪ್ರಯತ್ನ ಪಟ್ಟರೂ ರಾಘವೇಂದ್ರ ಶೆಟ್ಟಿಗೆ ಆಗಿಲ್ಲ.

ರಾಘವೇಂದ್ರ ಶೆಟ್ಟಿ ಮಗ ಡಿ.ವೆಂಕಟ್ ಪ್ರಶಾಂತ್ ( 42) ಮತ್ತು ಆತನ ಹೆಂಡತಿ ಡಿ ಚಂದ್ರಕಲಾ (38) ಹಾಗೂ ಮೊಮ್ಮಕ್ಕಳಾದ ಹೆಚ್. ಎ. ಅರ್ದ್ವಿಕ್ (16) ಹಾಗೂ ಪ್ರೇರಣಾ (8) ಮೃತಪಟ್ಟವರು. ವಿಷಯ ತಿಳಿದಾಕ್ಷಣ ಅಗ್ನಿ ಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದೆ. ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

