ಧಗಧಗನೆ ಹೊತ್ತಿಉರಿದ ಸಾಮಿಲ್: ಲಕ್ಷಾಂತರ ರೂಪಾಯಿ ನಷ್ಟ
ಭದ್ರಾವತಿ: ನೋಡ-ನೋಡುತ್ತಿದ್ದಂತೆ ಸಾಮಿಲ್ ಹೊತ್ತಿ ಉರಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಬುಧವಾರ ರಾತ್ರಿ ದುರ್ಘಟನೆ ನಡೆದಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದಿಲ್ಲ, ಬಹುಶಃ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಹೇಳಲಾಗ್ತಿದೆ. ಸ್ಥಳದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಒಂಭತ್ತು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಕಟ್ಟಿಗೆ ಮಿಲ್ ಆದ್ದರಿಂದ ಬೆಂಕಿ ಆರಿಸುವುದ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಮಂಜುನಾಥ್ ಎಂಬುವವರಿಗೆ ಸೇರಿದ ಸಾಮಿಲ್ ಇದಾಗಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರದ ದಿಮ್ಮಿಗಳು ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾದವು.
ಸಾಮಿಲ್‌ಗೆ ಬೆಂಕಿ ಬಿದ್ದಿದ್ದನ್ನು ಯಾರೋ ದಾರಿಹೋಕರು ಅಗ್ನಿಶಾಮಕ ಸಿಬ್ಬಂದಿಗೆ ಫೋನ್ ಮಾಡಿ ತಿಳಿಸಿದ್ದಾರೆ. ಅಗ್ನಿಶಾಮಕ ವಾಹನ ಸ್ಥಳಕ್ಕೆ ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಿಮ್ಮಿತ್ತು. ನೋಡಿದಷ್ಟೂ ಧಗಧಗನೆ ಹೊತ್ತಿ ಉರಿಯುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿಗೂ ಕಟ್ಟಿಗೆಗೂ ಅವಿನಾಭಾವ ಸಂಭಂದ ಹಾಗಾಗಿ ನಂದಿಸುವುದು ಅಗ್ನಿಶಾಮಕ ಸಿಬ್ಬಂದಿಗೆ ತುಸು ಕಷ್ಟವಾಯಿತು. ಅಕ್ಕಪಕ್ಕದ ಮರ, ಬಿಲ್ಡಿಂಗ್‌ಗಳಿಗೂ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿತ್ತು. ಝಗಮಗಿಸುವ ಹಾಗೆ ಬೆಂಕಿ ಹೊತ್ತಿದ್ದರಿಂದ ಸ್ಥಳೀಯರಲ್ಲಿ ಕೆಲಕಾಲ ಅತಂಕ ಸೃಷ್ಟಿಯಾಗಿತ್ತು. ಲಕ್ಷಾಂತರ ಬೆಲೆ ಬಾಳುವ ಮರದ ಮುಟ್ಟುಗಳ ನಾಶದಿಂದ ಸಾಮಿಲ್ ಮಾಲೀಕ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಘಟನೆ ಸಂಬಂದ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.