ಪ್ರೇಮಸಾಯಿ ಹೆಸರಿನಲ್ಲಿ ವಂಚನೆ; ಚನ್ನಪಟ್ಟಣ ಠಾಣೆಯಲ್ಲಿ ದೂರು ದಾಖಲು
ರಾಮನಗರ; ಪ್ರೇಮಸಾಯಿ ಎಂದು ಹೇಳಿಕೊಂಡು ನಾನು ದೇವಮಾನವ, ಜನರ ಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ತಂಡದ ವಿರುದ್ಧ ಚನ್ನಪಟ್ಟಣ ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲಾಪುರದಿಂದ ಬಂದಿದ್ದ ತಂಡವೊಂದು ಪ್ರೇಮ ಸಾಯಿಬಾಬಾ ಎಂದು ಹೇಳಿಕೊಂಡು ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಆರೋಪಿಗಳು ನಾಪತ್ತೆಯಾಗಿದ್ದಾರೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ನಗರದ ಎಂ.ಜಿ. ರಸ್ತೆಯ ಯಶೋದಮ್ಮ ಎಂಬುವರ ಮನೆಯಲ್ಲಿ 8 ತಿಂಗಳಿಂದ ಸಚಿನ್ ಅಕಾರಾಂ ಸರ್ಗರ್ ಎಂಬಾತ ಜನರ ಸಮಸ್ಯೆ ಪರಿಹರಿಸುತ್ತೇನೆ ಎಂದು ನಿತ್ಯ ಬೆಳಗ್ಗೆ ಮತ್ತು ಸಂಜೆ ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದನು. ಈ ಬಗ್ಗೆ ತಿಳಿದ ಹಲವರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.