ದೊಡ್ಡಬಳ್ಳಾಪುರದಲ್ಲಿ ಹೊತ್ತಿ ಉರಿದ ಕೆಮಿಕಲ್ ಫ್ಯಾಕ್ಟರಿ
ದೊಡ್ಡಬಳ್ಳಾಪುರ; ಇಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ದುರಂತ ನಡೆದಿದೆ. ರೆಸೋನೆನ್ಸ್ ಲ್ಯಾಬರೇಟರೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕೆಮಿಕಲ್ ಫ್ಯಾಕ್ಟರಿಯಲ್ಲಿ ಈ ದುರ್ಘಟನೆ ನಡೆದಿದ್ದು, ಕಾರ್ಖಾನೆ ಹೊತ್ತಿ ಉರಿದಿದೆ.
ಇಂದು ಬೆಳಗ್ಗೆ 9 ಗಂಟೆಗೆ ಫ್ಯಾಕ್ಟರಿಯಲ್ಲಿ ದೊಡ್ಡ ಸ್ಫೋಟವಾಗಿದ್ದು, ಫ್ಯಾಕ್ಟರಿ ಹೊತ್ತಿ ಉರಿದಿದೆ. ಸ್ಫೋಟಗೊಂಡ ಹಿನ್ನೆಲೆ ದಟ್ಟವಾದ ಹೊಗೆ ಆವರಿಸಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ವೇಳೆಯಲ್ಲಿ ಫ್ಯಾಕ್ಟರಿಯಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಇದ್ದು, ಎಲ್ಲರು ತಕ್ಷಣ ಹೊರಗಡೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಳೆದ 30 ವರ್ಷಗಳಿಂದ ರೆಸೋನೆನ್ಸ್ ಲ್ಯಾಬರೇಟರೀಸ್ ಪ್ರೈವೇಟ್ ಲಿಮಿಟೆಡ್ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಔಷಧಿ, ಮಾತ್ರೆಗಳಿಗೆ ಬೇಕಾದ ರಸಾಯನಿಕಗಳನ್ನ ಉತ್ಪತಿ ಮಾಡಲಾಗುತ್ತದೆ. ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದ್ದು, ಬೆಂಕಿ ಅವಘಡದಿಂದ ಆದ ನಷ್ಟವನ್ನ ಅಂದಾಜು ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.