Districts

ಕಲುಷಿತ ನೀರಿನಿಂದಾಗಿ ಮೀನುಗಳು, ಬಾತುಕೋಳಿಗಳ ಸಾವು: ವಿಷಾಹಾರ ಸೇವಿಸಿ 60 ಕುರಿಗಳು ಮೃತ

ಮೈಸೂರು: ಕಲುಷಿತ ನೀರಿನಿಂದಾಗಿ ಕರೆಯಲ್ಲಿದ್ದ ಬಾತುಕೋಳಿಗಳು ಹಾಗೂ ಮೀನುಗಳು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ನಡೆದಿದೆ. ಆಲನಹಳ್ಳಿ ಸಮೀಪದ ಹೊರವಲಯದಲ್ಲಿರುವ ತಿಪ್ಪಯ್ಯನ ಕೆರೆಯಲ್ಲಿ ಮನಕಲುಕುವ ಘಟನೆ ನಡೆದಿದೆ. ಈ ದುರಂತಕ್ಕೆ ಕೆರೆಯಲ್ಲಿನ ನೀರು ಕಲುಷಿತಗೊಂಡಿರುವುದೇ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕೆರೆಗೆ ಯುಜಿಡಿ ನೀರು ಹರಿಯುತ್ತಿರುವುದರಿಂದ ಇಂತಹ ಅನಾಹುತಕ್ಕೆಕಾರಣವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಈ ಕೆರೆಯನ್ನು ಮೈಸೂರಿನ ಮೃಗಾಲಯ ನಿರ್ವಹಣೆ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಮೃಗಾಲಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಷಾಹಾರ ಸೇವಿಸಿ 60ಕುರಿಗಳು ಮೃತ

ಇನ್ನೊಂದೆಡೆ ವಿಷದ ಹುಲ್ಲು ಸೇವಿಸಿ 60ಕುರಿಗಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಕೆಆರ್ ನಗರ ತಾಲೂಕಿನ ಬಸವಾಪಟ್ಟಣದಲ್ಲಿ ನಡೆದಿದೆ. ರೈತ ಸಿದ್ದೇಗೌಡ, ಹೆಳವೇಗೌಡ ಎಂಬುವವರಿಗೆ ಸೇರಿದ ಕುರಿಗಳಾಗಿವೆ. ರೈತರು ಮೂಲತಃ ಮೈಸೂರಿನವರಲ್ಲ ಮಂಡ್ಯ ಜಿಲ್ಲೆಯವರು. ಸುಮಾರು 200 ಕುರಿಗಳನ್ನು ಮಂಡ್ಯದಿಂದ ಮೇವನ್ನು ಹರಿಸಿ ಮೈಸೂರಿಗೆ ಕರೆ ತಂದಿದ್ದರು. ಈ ವೇಳೆ ವಿಷದ ಹುಲ್ಲು ಸೇವನೆ ಮಾಡಿ ಸುಮಾರು 60 ಕುರಿಗಳು ಸಾವನ್ನಪ್ಪಿದ್ದು, ಕುರಿಗಳ ಸಾವಿನಿಂದ ಸುಮಾರು 15 ಲಕ್ಷ ನಷ್ಟವಾಗಿದೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಸದ್ಯ ಸಾವನ್ನಪ್ಪಿರುವ ಕುರಿಗಳನ್ನು ಕಂಡು ಮರುಕ ವ್ಯಕ್ತಪಡಿಸಿದ್ದಾರೆ.

Share Post